

ಮೈಸೂರು: ಸುರಿಯುವ ಜಿಟಿಜಿಟಿ ಮಳೆಯಲ್ಲಿಯೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಬುಧವಾರ ಕುಕ್ಕರಹಳ್ಳಿಕೆರೆ ಸ್ವಚ್ಛತಾ ಅಭಿಯಾನ ನಡೆಯಿತು.
ಹಲವು ಸಂಘಟನೆಗಳ ಸ್ವಯಂ ಸೇವಕರ ನೆರವಿನೊಂದಿಗೆ ಕುಕ್ಕರಹಳ್ಳಿಕೆರೆಯ ಪೂರ್ವ ದ್ವಾರದಿಂದ ಆರಂಭವಾದ ಸ್ವಚ್ಛತಾ ಅಭಿಯಾನಕ್ಕೆ ವಾಯು ವಿಹಾರಿಗಳು ಜತೆಗೂಡಿದರು. ಕೆರೆ ದಂಡೆ ಮತ್ತು ಆವರಣದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ನಗರ ಪಾಲಿಕೆಯ ವಾಹನಗಳಿಗೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್ ಅವರು, ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ನಗರ ವ್ಯಾಪ್ತಿಯಲ್ಲಿರುವ ಕೆರೆಗಳು, ಉದ್ಯಾನ, ಶಾಲೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ ಸಹಕಾರ ನೀಡುವ ಮೂಲಕ ಮೈಸೂರು ಮತ್ತೆ ಸ್ವಚ್ಛತಾ ಪ್ರಥಮ ನಗರ ಕೀರ್ತಿಗೆ ಪಾತ್ರವಾಗಬೇಕು ಎಂದು ಅಭಿಪ್ರಾಯಪಟ್ಟರು.
ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಎಸೆಯಬಾರದು. ಶೀಘ್ರದಲ್ಲಿಯೇ ವರ್ತುಲ ರಸ್ತೆಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ತೆರವಿಗೆ ಕ್ರಮವಹಿಸುವುದಾಗಿ ತಿಳಿಸಿದರು.
ಶೀಘ್ರ ಕಚೇರಿ ಆರಂಭ:
ಜುಲೈ ಅಂತ್ಯ ಅಥವಾ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಅಧಿಕೃತವಾಗಿ ಸಂಸದ ಕಚೇರಿ ಆರಂಭಿಸಲಾಗುವುದು. ಕುವೆಂಪುನಗರದಲ್ಲಿರುವ ತಮ್ಮ ಕಚೇರಿಯಲ್ಲಿ ನಾಗರಿಕರು ಅಹವಾಲು ಸ್ವೀಕರಿಸಲಾಗುತ್ತಿದೆ. ಈವರೆಗೆ 150ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅನೇಕ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದೆ ಎಂದರು.
ನಮ್ಮ ಮೈಸೂರು ಫೌಂಡೇಷನ್ ಅಧ್ಯಕ್ಷ ದಶರಥ, ಗಂಗಾಧರ ಗೌಡ ಇತರರು ಇದ್ದರು.
ಭೇರುಂಡ ಫೌಂಡೇಷನ್, ಸೈಬರ್‌ವರ್ಸ್, ರೋಟ್ಯಾಕ್ಟ್ ಕ್ಲಬ್, ರೋಟರಿ ಮೈಸೂರು, ಲಯನ್ಸ್ ಇಂಟರ್‌ನ್ಯಾಷನಲ್, ನಮ್ಮ ಮೈಸೂರು ಫೌಂಡೇಷನ್, ನರಡ್ಕೊ ಮೈಸೂರು ಸಂಸ್ಥೆಗಳು ಸಹಕಾರ ನೀಡಿದ್ದವು. ವಾಕಿಂಗ್‌ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯರು ಸಂಸದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರ ಸಭೆ ನಡೆಸಿದ ಮರು ದಿನ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಸಂಸದರಾಗಿ ಆಯ್ಕೆಯಾದ ಬಳಿಕ ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದ್ದಾರೆ.