

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಯ ಪುನರುಜ್ಜೀವನಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯವನ್ನು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಐಎನ್‌ಟಿಎಸಿಎಚ್) ಸಂಸ್ಥೆಗೆ ವಹಿಸಿದ್ದು, ಜೂನ್ ಅಂತ್ಯದೊಳಗೆ ವರದಿ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸೋಮವಾರ ನಡೆದ ಕುಕ್ಕರಹಳ್ಳಿ ಕೆರೆ ಯೋಜನಾ ಅನುಷ್ಠಾನ ಸಭೆಯಲ್ಲಿ ಅವರು ಮಾತನಾಡಿ, ಪರಿಣಿತರಿಂದ ಕುಕ್ಕರಹಳ್ಳಿ ಅಭಿವೃದ್ಧಿ ಸಂಬಂಧ ಯೋಜನೆ ಅನುಷ್ಠಾನಕ್ಕೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಸಲಹೆ ಸ್ವೀಕರಿಸಿ, ಈಗಾಗಲೇ ಕೈಗೊಂಡಿರುವ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಳ್ಳಿ ಕೆರೆಯ ವೀಕ್ಷಣೆಗೆ ಪ್ರತಿದಿನವೂ ಸಾವಿರಾರು ಜನರು ಬರುತ್ತಾರೆ. ಅಂತಹ ಸ್ಥಳವನ್ನು ಸದಾ ಸ್ವಚ್ಛ ಹಾಗೂ ಸುಂದರವಾಗಿ ಇರುವಂತೆ ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಡಿಸಿ ಹೇಳಿದರು.
ಕುಕ್ಕರಳ್ಳಿ ಕೆರೆಯ ಸುತ್ತಲು ಇರುವ ಅನಧಿಕೃತ ಒಳಚರಂಡಿಗಳನ್ನು ಮುಚ್ಚಿಸಿ ಅಲ್ಲಿಂದ ಕೆರೆ ನೀರಿಗೆ ಬರುತ್ತಿರುವ ಕೊಳಚೆ ನೀರನ್ನು ತಡೆಗಟ್ಟಬೇಕು. ಶುದ್ಧ ನೀರನ್ನು ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಕೆರೆಯ ವ್ಯಾಪ್ತಿಯಲ್ಲಿ ಕೆಲವೊಂದು ಕಡೆ ಕಸದ ರಾಶಿ ಕಂಡುಬರುತ್ತಿದ್ದು, ತಕ್ಷಣವೇ ಅದನ್ನು ತೆರವುಗೊಳಿಸಬೇಕು. ಆ ಸ್ಥಳಗಳಲ್ಲಿ ಪಾರ್ಕ್, ಕೂರಲು ಆಸನದ ವ್ಯವಸ್ಥೆ ಇತ್ಯಾದಿ ಉಪಯುಕ್ತ ಕೆಲಸಕ್ಕೆ ಜಾಗವನ್ನು ಬಳಸಿ ಸಾರ್ವಜನಿಕರಿಗೆ ಸಹಾಯವಾಗುವಂತೆ ಮಾರ್ಪಡಿಸಬೇಕು ಎಂದರು.
ಸುತ್ತಮುತ್ತಲಿನ ಶಬ್ದಮಾಲಿನ್ಯದಿಂದ ಕೆರೆಯ ಒಳಗಿರುವ ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಅದನ್ನು ತಡೆಯಲು ಸಾರ್ವಜನಿಕರಿಗೆ ಸೂಚನಾಫಲಕಗಳ ಮೂಲಕ ಮಾಹಿತಿ ನೀಡಿ ಶಬ್ದವನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಶುದ್ಧವಾದ ನೀರು, ಗಾಳಿ ಸಿಗುವಂತಹ ವಾತಾವರಣವನ್ನು ನಿರ್ಮಿಸಬೇಕು. ಕೆರೆಯೊಳಗೆ ಇರುವ ಬೇಡದ ದೋಣಿಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕರು ಕೆರೆಯೊಳಗೆ ಹೋಗದಂತೆ ನಿಗಾ ವಹಿಸಬೇಕು ಎಂದರು.
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಡಾ.ಎನ್.ಎನ್.ಮಧು, ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಜಲತಜ್ಞ ರವಿಕುಮಾರ್, ಇಂಟ್ಯಾಕ್ ಸಂಸ್ಥೆಯ ಅಧಿಕಾರಿಗಳು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಮೈಸೂರು ಪರಂಪರೆ ಸಮಿತಿಯ ಸದಸ್ಯರು, ಮೈಸೂರು ವಿಶ್ವವಿದ್ಯಾಲಯದ ಕುಕ್ಕರಹಳ್ಳಿ ಕೆರೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.