ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ - ಸಚಿವ ಹಾಲಪ್ಪ ಆಚಾರ್

Halappa Achar
Published on

ಕುಕನೂರು: ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಅರೆಬರೆ ಕಾಮಗಾರಿ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ರ‌್ಯಾವಣಕಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕಾಮಗಾರಿಗಳ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ರ‌್ಯಾವಣಕಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಕಾಮಗಾರಿ ವೀಕ್ಷಿಸಿದ ಸಚಿವರು, ಕಳಪೆ ಕಾಮಗಾರಿಗೆ ಸಿಡಿಮಿಡಿಗೊಂಡರು. ಹೀಗೆನಾ ಕೆಲಸ ಮಾಡೋದು ಎಂದು ಇಂಜಿನಿಯರಿಗೆ ತರಾಟೆ ತೆಗೆದುಕೊಂಡರು. ಸಚಿವರ ಮಾತಿಗೆ ಯಾವುದೇ ಉತ್ತರ ನೀಡದ ಇಂಜಿನಿಯರ್, ತಲೆ ತಗ್ಗಿಸಿ ನಿಂತಿದ್ದರು. ತಾಲೂಕಿನ ನೆಲಜೇರಿ, ವಟಪರವಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮಂಗಳೂರು ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ ಹಳ್ಳಿ, ಪಿಡಿಒ ನೀಲಂ ಚಳಗೇರಿ, ಬಿಜೆಪಿ ಮಂಡಲದ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ಪ್ರಮುಖರಾದ ಶರಣಪ್ಪ ತುಮ್ಮರಗುದ್ದಿ, ವೀರಣ್ಣ ಹುಬ್ಬಳ್ಳಿ, ಶಂಭು ಜೋಳದ ಇತರರಿದ್ದರು.

ಕ್ಷೇತ್ರದಲ್ಲಿ ಸೀರೆ ವಿತರಿಸುತ್ತಿರುವುದು ಗಮನಕ್ಕೆ ಬಂದಿಲ್ಲ. ಹುಟ್ಟುಹಬ್ಬಕ್ಕಾಗಿ ಕಾರ್ಯಕರ್ತರು ಪ್ರೀತಿಯಿಂದ ಹಂಚಿರಬಹುದು. ಬಿಜೆಪಿ ಕಾರ್ಯಕರ್ತರ ಸೇವೆಯಿಂದ ಕಾಂಗ್ರೆಸ್‌ನವರಿಗೆ ಸೋಲುವ ಭಯ ಆರಂಭವಾಗಿದೆ. ಇದರಿಂದ ಇಂತಹ ಸಣ್ಣ ವಿಚಾರಗಳನ್ನು ಮುಂದೆ ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ.| ಹಾಲಪ್ಪ ಆಚಾರ್, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net