

ಕುಕನೂರು: ವಿವಿಧ ಸಮಸ್ಯೆಗಳ ಇತ್ಯರ್ಥಕ್ಕೆ ಅಧಿಕಾರಿಗಳ ಸಭೆ ಕರೆಯುವಂತೆ ಒತ್ತಾಯಿಸಿ ವಿಕಲಚೇತನ ನೌಕರರ ಸಂಘ ಭಾನುವಾರ ತಾಲೂಕಿನ ಮಸಬಹಂಚಿನಾಳದಲ್ಲಿ ಸಚಿವ ಹಾಲಪ್ಪ ಆಚಾರ್‌ಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಸುಪ್ರೀಂಕೋರ್ಟ್ ಅಂಗವಿಕಲ ನೌಕರರ ಸೇವಾ ಜ್ಯೇಷ್ಠತೆ ಅನುಸರಿಸಿ ಬಡ್ತಿಯಲ್ಲಿ ಶೇ.4 ಮೀಸಲು ನೀಡುವಂತೆ ಮೂರು ವರ್ಷದ ಹಿಂದೆಯೇ ಆಯಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದೆ. ಅಲ್ಲದೆ ಇದನ್ನು ಯಾವ ರೀತಿ ನೀಡಬೇಕೆಂಬ ಬಗ್ಗೆ ಕೇಂದ್ರ ಸರ್ಕಾರ ಕಾರ್ಯಸೂಚಿ ಜಾರಿಗೊಳಿಸಿದೆ. ಆದರೆ, ರಾಜ್ಯ ಸರ್ಕಾರದಿಂದ ಇಂತಹ ಯಾವುದೇ ಕಾರ್ಯವಾಗಿಲ್ಲ. ಇದರಿಂದ ಅಂಗವಿಕಲ ನೌಕರರು ಬಡ್ತಿ ಸೌಲಭ್ಯದಿಂದ ವಂಚಿತಾಗುತ್ತಿದ್ದಾರೆ. ಶಿಕ್ಷಕರ ವರ್ಗಾವಣೆಯಲ್ಲಿ ಪದೇಪದೆ ಅಂಗವೈಕಲ್ಯತೆ ಪ್ರಮಾಣ ಪತ್ರ ಕೇಳುವುದು, ಎಲ್ಲ ಸೌಲಭ್ಯಗಳಿಗೆ ಯುಡಿಐಡಿ ಕಾರ್ಡ್ ಪರಿಗಣಿಸುವುದು ಸೇರಿ ಅನೇಕ ಸಮಸ್ಯೆಗಳಿವೆ. ಈ ಕುರಿತು ಅಧಿಕಾರಿಗಳ ಸಭೆ ಕರೆದು ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವ ಹಾಲಪ್ಪ ಆಚಾರ್, ಶೀಘ್ರವೇ ಅಧಿಕಾರಿಗಳ ಜತೆ ಬೆಂಗಳೂರಿನಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಸಂಘದ ರಾಜ್ಯ ತಾಂತ್ರಿಕ ಗೌರವ ಸಲಹೆಗಾರ ಕಾಶಿನಾಥ ಸಿರಿಗೇರಿ, ಜಿಲ್ಲಾಧ್ಯಕ್ಷ ಅಂದಪ್ಪ ಬೋಳರಡ್ಡಿ, ತಾಲೂಕಾಧ್ಯಕ್ಷ ಅಂದಪ್ಪ ಇದ್ಲಿ, ಕುಕನೂರು ತಾಲೂಕು ಅಧ್ಯಕ್ಷ ಲಾಲ್‌ಬಾಷಾ ಇತರರಿದ್ದರು.