

ಕುಕನೂರು: ಶತಮಾನದ ಇತಿಹಾಸ ಹೊಂದಿರುವ ವಿದ್ಯಾನಂದ ಗುರುಕುಲ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರನ್ನು ಸ್ಮರಣೆ ಅಗತ್ಯ ಎಂದು ವಿದ್ಯಾನಂದ ಗುರುಕುಲ ಆಡಳಿತಾಧಿಕಾರಿ ಶರಣಪ್ಪ ಹೊಸಮನಿ ಹೇಳಿದರು.
ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ 103ನೇ ವರ್ಷದ ಸಂಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 1922 ರಲ್ಲಿ ರಾ.ಭೀ.ದೇಸಾಯಿ ಅವರು ಮಾಹಾಮಾಯ ದೇವಸ್ಥಾನದಲ್ಲಿ ಶಾಲೆಯನ್ನು ಆರಂಭಿಸಿದ್ದರು ಎಂದರು.
ಕಾರ್ಯಕ್ರಮಕ್ಕೆ ಆನ್‌ಲೈನ್ ವೀಡಿಯೋ ಮೂಲಕ ಆರ್ಶೀವಚನ ನೀಡಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿರುವ ಕುಕನೂರಿನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿದ್ಯಾನಂದ ಗುರುಕುಲಕ್ಕೆ ಇಂದು 103 ವರ್ಷ ತುಂಬಿದೆ. ಇದೆ ವರ್ಷ ನಡೆಯುವ ಶತಮಾನೋತ್ಸದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದರು.
ಗುರುಕುಲ ಶಿಕ್ಷಣ ವಿಶ್ವಸ್ತ ಮಂಡಳಿಯ 103ನೇ ವಾರ್ಷಿಕೋತ್ಸವದ ನಿಮಿತ್ತ ಸಂಸ್ಥೆಯ ವಿಶ್ವಸ್ತರಾದ ಡಾ.ಮದನ್‌ಲಾಲ್ ಜೈನ್ ಧ್ವಜಾರೋಹಣ ನರವೇರಿಸಿದರು. ಹಳೇ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಈಶಣ್ಣ ಗುಳಗಣ್ಣವರ್ ಮತ್ತು ಧನರಾಜ ರಾಮಣ್ಣ ಜಗತಾಪ್ ಅವರನ್ನು ಸನ್ಮಾನಿಸಲಾಯಿತು.
ವಿಶ್ವಸ್ತರಾದ ಡಾ.ಕೆ.ಜಿ.ಕುಲಕರ್ಣಿ, ಎಸ್.ರವಿಕುಮಾರ, ಶತಮಾನೋತ್ಸವದ ಸಮಿತಿಯ ಅಧ್ಯಕ್ಷ ವಿಠಲ್‌ರಾವ್ ಜೋಶಿ, ಡಿಪ್ಲೊಮಾ ಕಾಲೇಜ್ ಪ್ರಾಚಾರ್ಯ ಅಮರೇಶ್, ಪಿಯು ಕಾಲೇಜ್ ಪ್ರಾಚಾರ್ಯ ಎನ್.ಪಾಂಡುರಂಗ, ಉಪ ಪ್ರಾಚಾರ್ಯ ಸೋಮಶೇಖರ್ ನಿಲೋಗಲ್, ಆಡಳಿತಾಧಿಕಾರಿಗಳಾದ ಎನ್.ಕೆ.ದೀಕ್ಷಿತ್, ಶ್ರೀನಿವಾಸ ದೇಸಾಯಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ ಹೆಳವರ ಇತರರಿದ್ದರು.