

ಕುಕನೂರು: ಪಟ್ಟಣದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಿನ ಮೇಲೆ ಅವರ ಅಭಿಮಾನಿಯೊಬ್ಬ ಮಟನ್-ಚಿಕನ್ ಅಂಗಡಿ ನಡೆಸುತ್ತಿದ್ದಾನೆ.
ಖಾದೀರ್ ಬಾಬಣ್ಣ ಕಲಾಲ ಎನ್ನುವ ಯುವಕ ಕಳೆದ 20 ವರ್ಷಗಳಿಂದ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿ. 2008ರಲ್ಲಿ ಪಟ್ಟಣಕ್ಕೆ ಶೋಭಾ ಕರಂದ್ಲಾಜೆ ಚುನಾವಣೆಗೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಅವರ ರಾಜಕೀಯ ಮಾತುಗಳನ್ನು ಕೇಳಿ ಮನಸೋತು ಅವರ ಅಭಿಮಾನಿಯಾಗಿದ್ದಾರೆ.
ಐದು ವರ್ಷಗಳ ಹಿಂದೆ ಶೋಭಾ ಕರಂದ್ಲಾಜೆ ಅವರ ಫೋಟೋವನ್ನು ಕೈಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಸದ್ಯ ನೂತನವಾಗಿ ಪ್ರಾರಂಭಿಸಿರುವ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್-ಚಿಕನ್ ಸೆಂಟರ್ ಎಂಬುದಾಗಿ ಬರೆಸಿ ಅಂಗಡಿ ನಡೆಸುತ್ತಿದ್ದಾರೆ.
ಸುಮಾರು 20 ವರ್ಷಗಳಿಂದ ಶೋಭಾ ಕರಂದ್ಲಾಜೆ ಅವರ ಅಭಿಮಾನಿಯಾಗಿದ್ದು, ಮಾಜಿ ಸಚಿವ ಹಾಲಪ್ಪ ಆಚಾರ್ ನಿವಾಸದಲ್ಲಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ನನ್ನ ಅಂಗಡಿಗೆ ಅವರ ಅಭಿಮಾನಿಯಾಗಿ ಹೆಸರನ್ನು ಹಾಕಿಸಿದ್ದೇನೆ.ಖಾದೀರ್ ಕಲಾಲ, ಅಭಿಮಾನಿ, ಕುಕನೂರು