

ಕುಕನೂರು: ಮಕ್ಕಳಿಗೆ ಶೈಕ್ಷಣಿಕ ಜಾಗೃತಿ ಮೂಡಿಸುವ ಸಾಹಿತ್ಯ ಚಟುವಟಿಕೆಗಳನ್ನು ನಿರಂತರ ಆಯೋಜಿಸುವುದು ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಹೇಳಿದರು.
ಪಟ್ಟಣದ ದತ್ತ ಕಾಲನಿಯ ಜಿಡಗಿ ಅವರ ಪ್ರಾಂಗಣದಲ್ಲಿ ಶ್ರೀ ಶಿವಸಂಗಮೇಶ್ವರ ತರಬೇತಿ ಕೇಂದ್ರ ಹಾಗೂ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕರ ದಿನ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಚಟುವಟಿಕೆಗಳು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಇದರಿಂದ ಭಾಷೆ, ವ್ಯಾಕರಣ ಸುಧಾರಣೆ, ಕಾವ್ಯದ ತತ್ವ ಪರಿಚಯವಾಗುತ್ತದೆ. ಸಾಹಿತ್ಯ ದಿಗ್ಗಜರ ವಿಚಾರಗಳಿಂದ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತದೆ.
ಸಂಘ-ಸಂಸ್ಥೆಗಳು ಕನ್ನಡ ಪರಂಪರೆಯ ಮನಸ್ಸುಗಳು ಉತ್ತಮ ವೇದಿಕೆ ಕಲ್ಪಿಸಿ ಎಲೆಮರೆ ಕಾಯಿಯಂತೆ ಇರುವ ಪ್ರತಿಭೆಗಳ ಅನಾವರಣಕ್ಕೆ ಶ್ರಮಿಸೋಣ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ ಶಿಕ್ಷಣ ಹಾಗೂ ಕನ್ನಡ ಸಾಹಿತ್ಯ ಭಾಷೆ ಕುರಿತು ಉಪನ್ಯಾಸ ನೀಡಿ, ಪ್ರತಿಯೊಬ್ಬರೂ ಭಾಷೆಯ ಸೊಗಡನ್ನು ಅರಿತು ಕನ್ನಡ ಉಳಿವಿಗೆ ಪ್ರಯತ್ನಿಸಬೇಕು. ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಡು, ನುಡಿ, ಸಂಸ್ಕೃತಿ ಏಳ್ಗೆಗೆ ಪ್ರಯತ್ನಿಸಬೇಕು ಎಂದರು.
ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಉಪ್ಪಿನ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮೇಘರಾಜ ಎಸ್.ಜಿಡಗಿ, ನಿವೃತ್ತ ಮುಖ್ಯಶಿಕ್ಷಕಿ ಬಸವಣ್ಣೆಮ್ಮ ಅರಳೆಲೆಮಠ ಅವರನ್ನು ಗೌರವಿಸಲಾಯಿತು.
ಸಾಹಿತಿಗಳಾದ ರವಿ ಹಿರೇಮನಿ, ಈರಯ್ಯ ಕುರ್ತಕೋಟಿ, ಶಿಕ್ಷಕರಾದ ರೇಣುಕಾ ರಾಟಿಮನಿ, ಜಯಶ್ರೀ ಪವಾಡಶೆಟ್ರು, ಅನ್ನಪೂರ್ಣಾ, ಮಂಗಳಾ ಹನಸಿ, ಲಕ್ಷ್ಮೀ ಪವಾಡಶೆಟ್ಟಿ, ಪಾರ್ವತಿ ಹನಸಿ, ಭಾರತಿ ಜಿಡಗಿ, ವಸಂತ ಗುಡಿ ಇತರರಿದ್ದರು.