

ಕುಕನೂರು: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ ಸದೃಢರಾಗಿರಬೇಕು ಎಂದು ದಂತ ವೈದ್ಯಾಧಿಕಾರಿ ಅಭಿಷೇಕ ಹೇಳಿದರು.
ತಾಲೂಕಿನ ಮಂಗಳೂರು ಹಾಗೂ ಬೇವೂರು ಸಮುದಾಯ ಆರೋಗ್ಯ ಕೇಂದ್ರದಿಂದ ತರಲಕಟ್ಟಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಸಮಗ್ರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ದೈಹಿಕ ಸದೃಢತೆಗೆ ಬಾಯಿ ಆರೋಗ್ಯ ತುಂಬಾ ಮುಖ್ಯ. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್‌ಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಸಾರ್ವಜನಿಕರು ಗುಟ್ಖಾ, ಸಿಗರೇಟ್ ಬಳಕೆ ತ್ಯಜಿಸಿ ಆರೋಗ್ಯಕ್ಕೆ ಆದ್ಯತೆ ನೀಡಬೇಕು.
ಕ್ಷಯರೋಗ, ಎಚ್‌ಐವಿ ಮತ್ತು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್‌ಇತರ ಸಾಮಾನ್ಯ ಕಾಯಿಲೆಗಳ ಸಮಗ್ರ ಆರೋಗ್ಯ ತಪಾಸಣೆ ಮಾಡುವುದು ಶಿಬಿರದ ಉದ್ದೇಶವಾಗಿದೆ . ಸಾರ್ವಜನಿಕರು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಪ್ತ ಸಮಾಲೋಚಕ ಅಮರೇಶ ಅಂಗಡಿ ಮಾತನಾಡಿ, ಯುವಕರು, ದುಡಿವ ವರ್ಗದವರು ಅಂತರ್ಜಾಲದ ದುರ್ಬಳಕೆ ಮತ್ತು ಕ್ಷಣಿಕ ಸುಖಕ್ಕಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ ಕ್ರಿಯೆಯಲ್ಲಿ ತೊಡಗಿ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಕಾರಣ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು ಎಂದರು.
ಗ್ರಾಪಂ ಸದಸ್ಯ ಬಸಪ್ಪ ಕೋಳೂರು, ಪ್ರಮುಖರಾದ ತೋಟಪ್ಪ ಬೇವೂರು, ಹನಮಂತಪ್ಪ ಕನಕಗಿರಿ, ಪ್ರಯೋಗಶಾಲಾ ತಂತ್ರಜ್ಞ ರಮೇಶ, ಬೇವೂರು ಪಿಎಚ್‌ಸಿ ಸಿಬ್ಬಂದಿ ರತ್ನಾ ಬಡಿಗೇರ, ಮಂಜುಳಾ, ಶಾಂತಾ, ಶಾವಂತ್ರಮ್ಮ, ಬಸಮ್ಮ, ಚನ್ನಬಸಮ್ಮ, ಚೈತನ್ಯ ಸಂಸ್ಥೆಯ ಶರಣಪ್ಪ, ಅಂಬಣ್ಣ, ಆದಪ್ಪ, ಸ್ನೇಹಾ ಮಹಿಳಾ ಸಂಘದ ಬಸಮ್ಮ, ಲಕ್ಷ್ಮೀ ಇತರರಿದ್ದರು.