

ಕುಕನೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಅವರನ್ನು ಗಡಿಪಾರು ಮಾಡಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಚಂದ್ರಕಾಂತ್ ಎಸ್.ಕಾದ್ರೋಳ್ಳಿ ಬಣದ ತಾಲೂಕು ಸಮಿತಿ ಸದಸ್ಯರು ಪಟ್ಟಣದ ಗ್ರೇಡ್-2 ತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಅ.6ರಂದು ವಿಷ್ಣು ಮೂರ್ತಿ ಭಗ್ನ ಪ್ರಕರಣದ ತೀರ್ಪಿನಲ್ಲಿ ಇದು ನ್ಯಾಯಾಲಯಕ್ಕೆ ಸಂಬಂಧಿಸಿದ್ದಲ್ಲ. ನೀವು ಆರ್ಕೆಲಾಜಿಕಲ್ ಸರ್ವೇ ಆಫ್ ಇಂಡಿಯಾಕ್ಕೆ ಅರ್ಜಿ ಸಲ್ಲಿಸಿ ಎಂದು ಕಾನೂನಿನ ಪ್ರಕಾರ ತೀರ್ಪು ನೀಡುವ ಮೂಲಕ ನ್ಯಾಯದ ಪರ ನಿಂತಿದ್ದರು. ಆದರೆ ಇದನ್ನು ಸಹಿಸದ ರಾಕೇಶ್ ಕಿಶೋರ್ ಎಂಬ ದೇಶದ್ರೋಹಿ ನಡೆ ಅನುಸರಿಸಿದ್ದಾರೆ. ಅವರ ನಡೆ ಕಾನೂನು ಮತ್ತು ಸಂವಿಧಾನಕ್ಕೆ ಧಕ್ಕೆ ತಂದಿದ್ದಾರೆ. ಅವನನ್ನು ಭಾರತದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಶ್ರೀಕಾಂತ ಹೊಸಮನಿ, ತಾಲೂಕು ಉಪಾಧ್ಯಕ್ಷ ಯಮನಪ್ಪ ದೊಡ್ಮನಿ, ಜಿಲ್ಲಾ ಉಪಾಧ್ಯಕ್ಷ ಗಾಳೆಪ್ಪ ಮಕ್ಕಳಿ, ಪ್ರಮುಖರಾದ ಮುತ್ತು ಅರಕೇರಿ, ಯಮನೂರಪ್ಪ ಬನಕಾರ, ಶಂಕರ ಬಣಕಾರ, ಅರ್ಜುನ, ಶರಣಪ್ಪ ಹಿರೇಮನಿ ಇತರರಿದ್ದರು.