

ಕುಕನೂರು: ನಿರಂತರ ಮಳೆಯಿಂದ ಹಿಂಗಾರು ಬಿತ್ತನೆಗೆ ಹಿನ್ನಡೆಯಾಗಿದ್ದು, ಈಗಾಗಲೇ ಬಿತ್ತನೆ ಮುಗಿಸಿರುವ ರೈತರಿಗೆ ಬೆಳೆ ಕೈಗೆ ದೊರೆಯುವುದಿಲ್ಲ ಎನ್ನುವ ಆತಂಕ ಸೃಷ್ಟಿಯಾಗಿದೆ.
ತಾಲೂಕಿನಾದ್ಯಂತ ಕಳೆದ 15 ದಿನದಿಂದ ಮಳೆ ಸುರಿಯುತ್ತಿದ್ದು, ಸದ್ಯ ಹಸ್ತ, ಚಿತ್ತ ಮಳೆಗೆ ಕಡಲೆ, ಬಿಳಿಜೋಳ ಬಿತ್ತನೆ ಮಾಡಬೇಕಾಗಿತ್ತು. ಆದರೆ, ಈ ಎರಡೂ ಮಳೆ ಬಿತ್ತನೆಗೆ ಅನುವು ನೀಡಲಿಲ್ಲ. ಅಕ್ಟೋಬರ್ ಮೊದಲ ವಾರದಲ್ಲಿಯೇ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದರು. ಕೆಲವರು ಬಿತ್ತನೆ ಮಾಡಿ ಮನೆ ಸೇರುತ್ತಿದ್ದಂತೆ ಮಳೆ ಸುರಿದ ಪರಿಣಾಮ ಬಿತ್ತಿದ ಬೆಳೆ ಮೊಳಕೆಯೊಡದಿಲ್ಲ.
ಇದರಿಂದ ಮರು ಬಿತ್ತನೆ ಮಾಡಬೇಕಾದ ಅನಿರ್ವಾತೆ ಎದುರಾಗಿದೆ. ಪ್ರತಿ ಎಕರೆಗೆ 20-25 ಸಾವಿರ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು, ಕಷ್ಟ ಎದುರಿಸಬೇಕಾಗಿದೆ. ಇನ್ನು ಬಿತ್ತನೆ ಮಾಡದೇ ಇರುವ ರೈತರು ಅವಧಿ ಮೀರಿ ಬಿತ್ತನೆ ಮಾಡಿದರೆ ಇಳುವರಿ ಬರುವುದಿಲ್ಲ ಎನ್ನುವ ಭಯ ಕಾಡುತ್ತಿದೆ.
ತಾಲೂಕಿನಲ್ಲಿ ಪ್ರಸಕ್ತ ಹಿಂಗಾರು ಬಿತ್ತನೆಗೆ ಕಡಲೆ 32,000 ಹೆಕ್ಟೇರ್ ಪ್ರದೇಶ ಗುರಿ ನಿಗದಿಯಾಗಿದ್ದು, ಇದರಲ್ಲಿ 16,000 ಹೆಕ್ಟೇರ್ ಬಿತ್ತನೆಯಾಗಿದೆ.
ಬಿಳಿಜೋಳ 12,000 ಹೆಕ್ಟೇರ್ ಗುರಿ ಇದ್ದು, 3,000 ಹೆಕ್ಟೇರ್ ಬಿತ್ತನೆಯಾಗಿದೆ. ಇನ್ನೂ ಶೇ.60 ಬಿತ್ತನೆಯಾಗಬೇಕಾಗಿದೆ. ಅಲ್ಲದೇ ಈ ಬಾರಿ ಮಸಾರಿ ಹಾಗೂ ಕಪ್ಪು ಭೂಮಿಗಳಿಗೆ ಕರಿಹುಳ್ಳಿ ಹಾಗೂ ಕೆಂಪುಹುಳ್ಳಿ ಹೆಚ್ಚು ಬಿತ್ತನೆಯಾಗಿದೆ. ಹೆಚ್ಚು ಭೂಮಿ ಹೊಂದಿರುವ ರೈತರು ಕಡಲೆ ಬಿತ್ತನೆ ಹಾಗೂ ಕಟಾವಿಗೆ ಹೆಚ್ಚು ಖರ್ಚು ಎನ್ನುವ ಉದ್ದೇಶದಿಂದ ಹುಳ್ಳಿ ಬೆಳೆಯತ್ತ ಮುಖ ಮಾಡಿದ್ದಾರೆ.
ದೀಪಾವಳಿ ನಂತರವೇ ಹೆಚ್ಚು ಬಿತ್ತನೆಯಾಗುವ ಸಾಧ್ಯತೆ ಇದೆ. ಮಳೆ ನಿಂತರೆ ಬಿತ್ತನೆ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಆದರೆ, ಬೆಳಗ್ಗೆ ಬಿಸಿಲು ರಾತ್ರಿ ಮಳೆ ಸುರಿಯುತ್ತಿದೆ.
ಅಕ್ಟೋಬರ್ ಮೊದಲ ವಾರವೇ ಹಿಂಗಾರು ಬಿತ್ತನೆ ಪ್ರಾರಂಭಿಸಲಾಗಿತ್ತು. ಆದರೆ, ಬಿತ್ತನೆ ಮಾಡಿ ಮನೆ ಸೇರುವಷ್ಟರಲ್ಲಿ ಸುರಿದ ಮಳೆಯಿಂದ ಕಡಲೆ ಬೀಜ ಭೂಮಿಯಿಂದ ಮೇಲೇಳದೆ ಅಲ್ಲೇ ಕೊಳೆತಿದ್ದು, ಸಾವಿರಾರೂ ಖರ್ಚು ಮಾಡಿ ಬಿತ್ತನೆ ಮಾಡಿ ನಷ್ಟ ಅನುಭವಿಸಬೇಕಾಗಿದೆ. ಅಕ್ಟೋಬರ್ ತಿಂಗಳೊಳಗೆ ಹಿಂಗಾರು ಬಿತ್ತನೆ ಪೂರ್ಣಗೊಳ್ಳಬೇಕಾಗಿತ್ತು. ನಿರಂತರ ಮಳೆಯಿಂದ ವಿಳಂಬವಾಗುತ್ತಿದೆ. ರುದ್ರಗೌಡ ಬಾವಿ ರೈತ, ಭಾನಾಪುರ ಈವರೆಗೆ ಹಿಂಗಾರು ಕಡಲೆ, ಜೋಳ ಶೇ.40 ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ವಿಳಂಬಗೊಂಡರೆ ಮುಂದೇ ರೋಗಬಾಧೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಾರಿ ಕಡಲೆ ಹೆಚ್ಚು ಬಿತ್ತನೆ ಗುರಿ ಇದೆ. ಬಸವರಾಜ ತೇರಿನ್ ಕೃಷಿ ಅಧಿಕಾರಿ, ಕುಕನೂರು