ಮರೀಚಿಕೆಯಾದ ಖರೀದಿ ಕೇಂದ್ರ

KKNR HESRU BELE
ಕುಕನೂರಿನಲ್ಲಿ ಬೆಳೆದ ಹೆಸರು ಬೆಳೆ.
Published on

ಕುಕನೂರು: ರೈತರ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುತ್ತೇವೆ ಎನ್ನುವ ಸರ್ಕಾರಗಳ ಮಾತು ಕಾಗದಕ್ಕೆ ಮಾತ್ರ ಸೀಮಿತವಾಗಿದ್ದು, ಬೆಂಬಲ ಬೆಲೆಯ ಖರೀದಿ ಕೇಂದ್ರವು ರೈತರಿಗೆ ಮರಿಚಿಕೆಯಾಗಿದೆ.

ತಾಲೂಕಿನ ಯರೇಹಂಚಿನಾಳ, ಬನ್ನಿಕೊಪ್ಪ, ಬಿನ್ನಾಳ, ಇಟಗಿ ಭಾಗದಲ್ಲಿ ಮುಂಗಾರು ಹಂಗಾಮಿಗೆ ಬೆಳೆದಿದ್ದ ಹೆಸರು ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಸರ್ಕಾರ ತ್ವರಿತವಾಗಿ ಬೆಂಬಲ ಬೆಲೆ ಕೇಂದ್ರ ತೆರೆಯಬೇಕು. ಆದರೆ, ಈ ಕಾರ್ಯ ಈ ವರೆಗೂ ನಡೆದಿಲ್ಲ. ತಾಲೂಕಿನಲ್ಲಿ 15,000 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ.

ನಿರಂತರ ಮಳೆಗೆ ಬೆಳೆ ಹಾಳಾಗಿರುವುದು ಒಂದೆಡೆಯಾದರೆ ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದಂತಾಗಿದೆ. ಇದು ಸಾಲದೆಂಬಂತೆ ವ್ಯಯಿಸಿದ ಕೂಲಿಯೂ ಸರಿದೂಗಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಷ್ಟದ ಭೀತಿ ರೈತರನ್ನು ಕಾಡುತ್ತಿದೆ.

ನಿರಂತರ ಮಳೆಗೆ ಫಸಲೇ ಇಲ್ಲ

ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಿಂದ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದೆ. ಆರಂಭದಲ್ಲಿ ರೈತರಿಗೆ ಖುಷಿ ನೀಡಿದ್ದ ಮಳೆರಾಯ ಮಧ್ಯದಲ್ಲಿ ಮಾಯಾವಾಗಿದ್ದು, ಬೆಳೆ ಒಣಗಲು ಆರಂಭವಾಗಿತ್ತು. ನಂತರ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೋಯ್ಲೋತ್ತರ ಚಟುವಟಿಕೆಗಳಿಗೆ ಬಿಡುವು ನೀಡಿಲ್ಲ. ಇದರಿಂದ ಫಸಲು ಸಮರ್ಪಕವಾಗಿ ಕೈಗೆಟುಕಿಲ್ಲ ಎನ್ನುವುದು ರೈತರ ಅಳಲು.

ಭೇಟಿ ನೀಡದ ಅಧಿಕಾರಿಗಳು

ಬೆಳೆ ನಷ್ಟದಿಂದ ರೈತರು ಕಷ್ಟ ಎದುರಿಸುತ್ತಿದ್ದರೂ ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ. ಅಲ್ಲದೇ ಹೆಸರು ಬೆಳೆಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿಲ್ಲ. ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕೂಡ ರೈತರ ಸಮಸ್ಯೆ ಬಗ್ಗೆ ಗಮನಹರಿಸಿಲ್ಲ. ಹಲವು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಬೆಳೆಗಾರರ ಬಗ್ಗೆ ಕಾಳಜಿವಹಿಸಿಲ್ಲ. ಆದ್ದರಿಂದ ಕೂಡಲೇ ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವುದು ರೈತರ ಆಗ್ರಹ.

======

ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರೈತರ ಎಲ್ಲ ಬೆಳೆಗಳನ್ನು ಬೆಂಬಲ ಬೆಲೆಗೆ ಖರೀಧಿಸಲಾಗುವುದು ಎಂದು ಘೋಷಣೆ ಮಾಡಿತ್ತು. ಆದರೆ, ಬಜೆಟ್ ಘೋಷಣೆ ಸಂದರ್ಭದಲ್ಲಿ ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳು ತೆರೆಯಲು ಮೀನಾಮೇಷ ಎಣಿಸುತ್ತವೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗುತ್ತಿದೆ.

> ಜಗದೀಶ ಚಟ್ಟಿ, ಉಪಾಧ್ಯಕ್ಷ, ಯರೇದೊರೆ ರೈತ ಉತ್ಪಾದಕ ಕಂಪನಿ ಬಿನ್ನಾಳ

======

ಕೃಷಿ ಇಲಾಖೆಯಿಂದ ಈಗಾಗಲೇ ಹೆಸರು ಬೆಳೆಗೆ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುಮೋದನೆಗೊಂಡರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

> ಬಸವರಾಜ ತೇರಿನ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕುಕನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net