

ಕುಕನೂರು: ಕಾಮಗಾರಿಗಳ ಮಾಹಿತಿ ಸರಿಯಾಗಿ ಒದಗಿಸುತ್ತಿಲ್ಲ ಎಂದು 19ನೇ ವಾರ್ಡ್ ಸದಸ್ಯ ಜಗನ್ನಾಥ ಭೋವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಪಂ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದರು.
19ನೇ ವಾರ್ಡ್‌ನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ. ಇದರ ಬಗ್ಗೆ ಮಾಹಿತಿ ಕೇಳಿದರೆ, ಸಂಬಂಧಿಸಿದ ಅಧಿಕಾರಿಗಳು ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಂತಹ ತಪ್ಪು ನಾನೇನು ಮಾಡಿದ್ದೇನೆ. ಇದಕ್ಕೆ ಅಧ್ಯಕ್ಷರು, ಅಧಿಕಾರಿಗಳು ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು. ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಪ್ರತಿಕ್ರಿಯಿಸಿ, ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ನೀಡುವುದಾಗಿ ಹೇಳಿ ಸಮಾಧಾನಪಡಿಸಿದರು.
2025-26ನೇ ಸಾಲಿನ 15ನೇ ಹಣಕಾಸು ಆಯೋಗದ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಮತ್ತು 2025-26ನೇ ಸಾಲಿಗೆ ಆಸ್ತಿ ತೆರಿಗೆ ದರ ಪರಿಷ್ಕರಿಸುವ ಕುರಿತು ಚರ್ಚಿಸಲಾಗಿದೆ. ಎಸ್ಸಿ ಸಮುದಾಯಕ್ಕೆ 15 ಲಕ್ಷ ರೂ., ಎಸ್ಟಿ ಸಮುದಾಯಕ್ಕೆ 6 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗಕ್ಕೆ 10 ಲಕ್ಷ ರೂ., ವೈಯಕ್ತಿಕ ಇತರ ಕೆಲಸಕ್ಕೆ ಅನುದಾನ ಬಂದಿದೆ ಎಂದು ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ತಿಳಿಸಿದರು.
ಬಹುಗ್ರಾಮ ಕುಡಿವ ನೀರು ಯೋಜನೆ ಜವಾಬ್ದಾರಿ ಹೊತ್ತ ಎಲ್‌ಎನ್‌ಟಿ ಕಂಪನಿ ಹಾಗೂ ತುಂಗಭದ್ರಾ ನೀರು ಯೋಜನೆ ನಿರ್ವಹಣೆ ಅಧಿಕಾರಿಗಳನ್ನು ಕರೆಯಿಸುವುದು ಸೇರಿ ಕುಡಿವ ನೀರು, ಸಿಸಿ ರಸ್ತೆ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಜವಳದ ರಸ್ತೆ ನಿರ್ಮಾಣ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು.
ಉಪಾಧ್ಯಕ್ಷ ಪ್ರಶಾಂತ್ ಆರುಬೆರಳ್ಳಿನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದೀನ್‌ಸಾಬ್ ಗುಡಿಹಿಂದಿಲ್, ಪಪಂ ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಗಗನ್ ನೋಟಗಾರ, ಸಿರಾಜ ಕರಮುಡಿ, ರಾಮಣ್ಣ ಬಂಕದಮನಿ, ಬಾಲರಾಜ ಗಾಳಿ, ರಾಧಾ ದೊಡ್ಡಮನಿ, ಕವಿತಾ ಹೂಗಾರ, ಮಂಜುನಾಥ ಕೊಳೂರು, ಮಲ್ಲಿಕಾರ್ಜುನ ಚೌದ್ರಿ, ಫಿರ್‌ದೋಷ್ ಬೇಗಂ, ನಾಮನಿರ್ದೇಶಿತ ಸದಸ್ಯರಾದ ಶರಣಯ್ಯ ಶಶಿಮಠ, ರಫಿಸಾಬ್ ಹಿರೇಹಾಳ, ಈರಣ್ಣ ಯಲಬುರ್ಗಿ ಇತರರಿದ್ದರು.