

ಕುಕನೂರು: ಸ್ಕ್ಯಾನ್ ಮಾಡುವ ಮೂಲಕ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಬಹುದು ಎಂದು ಪಿಡಿಒ ವೈಜನಾಥ ಸಾರಂಗಮಠ ಹೇಳಿದರು.
ಮಸಬಹಂಚಿನಾಳದಲ್ಲಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆ ಪ್ರಕ್ರಿಯೆ ಚಾಲನೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಗ್ರಾಮಸ್ಥರು ನರೇಗಾ ಕಾಮಗಾರಿ ಬೇಡಿಕೆಯನ್ನು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸಲ್ಲಿಸಬಹುದು. ಈ ಮೂಲಕ ಯೋಜನೆಯ ಸದುಪಯೋಗವನ್ನು ಅವಶ್ಯವಿರುವ ಫಲಾನುಭವಿಗಳು ಪಡೆದುಕೊಳ್ಳಬಹುದು ಎಂದರು.
ಒಬ್ಬ ಫಲಾನುಭವಿ ಗರಿಷ್ಠ ಮೂರು ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವುದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದಂತಾಗುತ್ತದೆ. ಬೇಡಿಕೆಯ ಕಾಮಗಾರಿಗಳ ಪೈಕಿ ಆದ್ಯತಾ ಪಟ್ಟಿ ತಯಾರಿಸಿ ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದರು.
ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ, ವಿಶೇಷ ಐಇಸಿ ಅಭಿಯಾನದಡಿ ಮನೆ ಮನೆಗೆ ಭೇಟಿ ನೀಡಿ ಕಾಮಗಾರಿ ಬೇಡಿಕೆ ಪಟ್ಟಿ ಸಿದ್ಧಪಡಿಸಲಾಗುವುದು. ಸದರಿ ಕಾಮಗಾರಿಗಳನ್ನು ತಾಂತ್ರಿಕ ಸಂಯೋಜಕರು ಪೂರ್ವಭಾವಿಯಾಗಿ ವೀಕ್ಷಣೆ ಮಾಡಿ ಅಂದಾಜು ಪತ್ರಿಕೆ ತಯಾರಿಸುತ್ತಾರೆ. ಅದೇ ಕಾಮಗಾರಿಯನ್ನು ಕ್ರಿಯಾ ಯೋಜನೆಯಲ್ಲಿ ಇಡುವುದರಿಂದ ಎಲ್ಲ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬಹುದು ಎಂದರು.
ಗ್ರಾಪಂ ಸದಸ್ಯರಾದ ಆನಂದಪ್ಪ ಮಾದನೂರ, ಪ್ರಕಾಶ ಈಳಿಗೇರ, ಕ್ಲಸ್ಟರ್ ಮೇಲ್ವಿಚಾರಕಿ ಪೂಜಾ ನಾಯಕ, ಗ್ರಾಮ ಕೂಲಿ ಸಹಾಯಕಿ ಗೀತಾ ಈಳಿಗೇರ, ಕರವಸೂಲಿಗಾರ ಮಂಜುನಾಥ ಉಳ್ಳಾಗಡ್ಡಿ, ಕೃಷಿ ಸಖಿ, ಪಶು ಸಖಿ ಇತರರಿದ್ದರು.