

ಕುಕನೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಉಳ್ಳಾಗಡ್ಡಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ರೈತರ ಹಕ್ಕು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶನಿವಾರ ತಹಸಿಲ್ ಕಚೇರಿಯ ಉಪತಸೀಲ್ದಾರ್ ಮುರಳೀಧರರಾವ್ ಕುಲಕರ್ಣಿಗೆ ಮನವಿ ಸಲ್ಲಿಸಿದರು.
ಮುಂಗಾರು ಹಂಗಾಮಿನಲ್ಲಿ ಯಲಬುರ್ಗಾ ಹಾಗೂ ಕುಕನೂರು ಭಾಗದಲ್ಲಿ ಉಳ್ಳಾಗಡ್ಡಿ ಹೆಚ್ಚಾಗಿ ಬೆಳೆಯುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಗಳೂರು ಮಾರುಕಟ್ಟೆಗೆ ಉಳ್ಳಾಗಡ್ಡಿ ತೆಗೆದುಕೊಂಡು ಹೋದರೆ ಲಾಭವಿಲ್ಲ. ದಲ್ಲಾಳಿಗಳು ಅಗ್ಗದ ಬೆಲೆಗೆ ಖರೀದಿಸಿ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಆರು ಸಾವಿರ ರೂ.ಯಂತೆ ಬೆಂಬಲ ಬೆಲೆಗೆ ಉಳ್ಳಾಗಡ್ಡಿ ಖರೀದಿ ಕೇಂದ್ರ ಆಂಭಿಸಬೇಕು ಎಂದು ಒತ್ತಾಯಿಸಿದರು. ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರು, ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ, ಪ್ರಧಾನ ಕಾರ್ಯದರ್ಶಿ ಕಳಕಪ್ಪ ಕ್ಯಾದಿಗುಂಪಿ, ತಾಲೂಕು ಅಧ್ಯಕ್ಷ ಹನುಮಂತಪ್ಪ ಮುತ್ತಾಳ ಇತರರಿದ್ದರು.