ಮೂಗಿಗೆ ತುಪ್ಪ ಸವರುವ ಕಾಂಗ್ರೆಸಿಗರು: ಸಚಿವ ಹಾಲಪ್ಪ ಆಚಾರ್ ಟೀಕೆ

181122 Virapura Minister Development Work Innogration
ವೀರಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮವನ್ನು ಸಚಿವ ಹಾಲಪ್ಪ ಆಚಾರ್ ಬುಧವಾರ ಉದ್ಘಾಟಿಸಿದರು.
Published on

ಕುಕನೂರು: ಚುನಾವಣೆ ಆಗಮಿಸುತ್ತಿದ್ದಂತೆ ಜನರ ಮೂಗಿಗೆ ತುಪ್ಪ ಸವರುವ ಕಾಂಗ್ರೆಸಿಗರು ವಿಳಾಸ ಇಲ್ಲದಂತೆ ಆಗಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.

ವೀರಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಕ್ಷೇತ್ರದ ರೈತರ ಆರ್ಥಿಕ ಸಬಲತೆಗಾಗಿ ನಾನು 2013 ಜನವರಿಯಲ್ಲಿ ಕೃಷ್ಣ ಬಿಸ್ಕೀಂಗೆ ಅಂದಿನ ಸಿಎಂ ಜಗದೀಶ ಶೆಟ್ಟರ್ ಹಾಗೂ ಆಗಿನ ನೀರಾವರಿ ಸಚಿವ, ಇಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಅಡಿಗಲ್ಲು ಹಾಕಿಸಿದ್ದೆ. ಇದನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ ತಮಾಷೆ ಮಾಡಿದರು. ಇಂದು ಕೆರೆ ತುಂಬಿಸುವ ಯೋಜನೆಯ ಪುಸ್ತಕ ವಿತರಣೆ ಮಾಡುತ್ತಿದ್ದಾರೆ. ಸತ್ಯಹರಿಶ್ಚಂದ್ರ ಬಂದರೂ ನೀರಾವರಿ ಆಗುವುದಿಲ್ಲ ಎಂದಿದ್ದ ಅವರಿಗೆ ನೀರಾವರಿ ಬಗ್ಗೆ ಕಾಳಜಿ ಇದೆಯಾ?. ರೈತರ ಕುರಿತು ಒಲವು ಇದ್ದಿದ್ದರೆ ಯೋಜನೆ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದರು. ಅವರಿಗೆ ಕೃಷ್ಣ ಬಿ ಸ್ಕೀಂನ 2ನೇ ಹಂತದ ಕಾಮಗಾರಿಗೆ ಅನುಮೋದನೆ ತರಲು ಆಗಲಿಲ್ಲ. ನೀರಾವರಿ ಮತ್ತು ಶಿಕ್ಷಣ ನನ್ನ ರಾಜಕೀಯ ಧ್ಯೇಯ. ಶೀಘ್ರವೇ ಕ್ಷೇತ್ರದ ಕೆರೆಗಳಿಗೆ ನೀರು ಹರಿಸುತ್ತೇನೆ. ಮಳೆ ಹಿನ್ನೆಲೆಯಲ್ಲಿ ಕಾಮಗಾರಿಗೆ ತಡೆಯಾಗಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ತಲಾ 4.95 ಕೋಟಿ ರೂ. ವೆಚ್ಚದಲ್ಲಿ ವೀರಾಪುರದಿಂದ ಭಾನಾಪುರ ಹಾಗೂ ವೀರಾಪುರದಿಂದ ಯತ್ನಟ್ಟಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು. ಗ್ರಾಪಂ ಸದಸ್ಯ ಶಿವಕುಮಾರ ಸೊಪ್ಪಿಮಠ, ಬಿಜೆಪಿ ಹಿರಿಯ ಮುಖಂಡ ಕೊಟ್ರಪ್ಪ ತೋಟದ, ವೀರಣ್ಣ ಅಂಗಡಿ, ಪ್ರಭು ಪಾಟೀಲ್ ಮಾತನಾಡಿದರು. ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ತಾಪಂ ಇಒ ರಾಮಣ್ಣ ದೊಡ್ಮನಿ, ಗ್ರಾಪಂ ಅಧ್ಯಕ್ಷೆ ಅನ್ನಮ್ಮ ತಿಪ್ಪರಸನಾಳ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಪ್ರಾಣೇಶ ಮಾದಿನೂರು, ನಾಗರಾಜ ವೆಂಕಟಾಪುರ, ಶರಣಪ್ಪ ವಡ್ಡರ್, ಇಂಜಿನಿಯರ್ ರಾಘವೇಂದ್ರ ಜೋಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net