

ಕುಕನೂರು: ಸತತ ಪ್ರಯತ್ನದಿಂದ ಕ್ಷೇತ್ರದ ಜನತೆಗೆ ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿದ್ದು, ರೈಲ್ವೆ ಗೇಟ್ ಮೇಲ್ಸೇತುವೆ ಕಾಮಗಾರಿಯೂ ಪೂರ್ಣಗೊಂಡು ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಭಾನಾಪೂರದಲ್ಲಿ ಗ್ರಾಪಂನಿಂದ ಸೋಮವಾರ ಆಯೋಜಿಸಿದ್ದ ಮೇಲ್ಸೇತುವೆ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು. 2014ರ ಮಾ.3ರ ಮಧ್ಯರಾತ್ರಿ ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವರಾಗಿದ್ದ ದಿ.ಆಸ್ಕರ್ ಫರ್ನಾಂಡಿಸ್ ಅವರ ಕಚೇರಿಗೆ ತೆರಳಿ ಭಾನಾಪೂರ-ಗದ್ದನಕೆರೆ 367 ರಾಷ್ಟ್ರೀಯ ಹೆದ್ದಾರಿಯನ್ನು ಮಂಜೂರು ಮಾಡಿಸಿದೆ. ಗಜೇಂದ್ರಗಡ ಮೂಲಕ ಕುಷ್ಟಗಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮಂಜೂರಾತಿ ಇತ್ತು. ಅದನ್ನು ಸರಿಪಡಿಸಿ ಕೈ ತಪ್ಪಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಮಂಜೂರು ಮಾಡಿಸಿದೆ. ನಂತರ ದಿನದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಕಾರ್ಯಾರಂಭ ಕೈಗೆತ್ತಿಕೊಂಡರು. ರಾಷ್ಟ್ರೀಯ ಹೆದ್ದಾರಿ ಮಂಜೂರು ಆಗಿದ್ದು ಯಲಬುರ್ಗಾ ಕ್ಷೇತ್ರದ ಸುದೈವ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ಒಂದೂ ಸಹ ರಾಷ್ಟ್ರೀಯ ಹೆದ್ದಾರಿ ಮಂಜೂರುಗೊಂಡಿಲ್ಲ. ಹಳೆಯ ಮಂಜೂರಾತಿಗಳನ್ನು ಕೈ ಗೆತ್ತಿಕೊಂಡಿದ್ದಾರೆ ಅಷ್ಟೇ. ರಾಜ್ಯದ ಸಂಸದರು ಮೋದಿ, ಅಮಿತ್ ಶಾ ಅವರಿಗೆ ಹೆದರುತ್ತಾರೆ. ಅವರ ಬಳಿ ತೆರಳಿ ಯಾವುದೇ ಯೋಜನೆ ತರುವುದಿಲ್ಲ. ಅಲ್ಲದೆ ರಾಜ್ಯಕ್ಕೆ ಬರಬೇಕಾಗಿರುವ 16ನೇ ಹಣಕಾಸು ಯೋಜನೆ ಹಣ ಸಹ ಸರಿಯಾಗಿ ಬಂದಿಲ್ಲ. ಇದರ ಬಗ್ಗೆ ಯೋಜನಾ ಆಯೋಗದ ಜತೆ ಸಭೆ ಮಾಡಲಾಗುವುದು ಎಂದರು.
ಸಂಸದ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ, ಭಾನಾಪೂರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಈ ಭಾಗದ ಜನರ ಬಹುದಿನದ ಆಸೆ ಆಗಿತ್ತು. ರಾಯರಡ್ಡಿ, ಸಂಗಣ್ಣ ಕರಡಿ ಅವರ ಪ್ರಯತ್ನದ ಫಲವಾಗಿ ಮೇಲ್ಸೇತುವೆ ನಿರ್ಮಾಣಗೊಂಡಿದೆ ಎಂದರು. ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ಜಿಲ್ಲೆಗೆ ಏರ್‌ಪೋರ್ಟ್, ಗಂಗಾವತಿ ರೈಲು ನಿಲ್ದಾಣದಿಂದ ಅಂಜನಾದ್ರಿವರೆಗೆ 10ಕಿ.ಮೀ ರೋಪ್ ವೇ ಮಾಡುವ ಕಾರ್ಯವನ್ನು ರಾಯರಡ್ಡಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅವರು ಮಾಡಬೇಕು ಎಂದರು.
ತಹಸೀಲ್ದಾರ್ ಎಚ್. ಪ್ರಾಣೇಶ, ತಾಲೂಕು ಪಂಚಾಯಿತಿ ಇಒ ಸಂತೋಷ ಬಿರಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ, ಉಪಾಧ್ಯೆಕ್ಷೆ ಪವಿತ್ರಾ ಬಂಗೇರ, ಪ್ರಮುಖರಾದ ಹನುಮಂತಗೌಡ ಚಂಡೂರು, ವೀರನಗೌಡ ಬಳೂಟಗಿ, ಚಂದ್ರಶೇಖರಯ್ಯ ಹಿರೇಮಠ, ಮಂಜುನಾಥ ಕಡೇಮನಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಕೃಷ್ಣರೆಡ್ಡಿ, ಗಿರೀಶ ಇತರರಿದ್ದರು.