

ಕುಕನೂರು: ಪ್ರಸಕ್ತ ವರ್ಷ ಮುಂಗಾರು ಆರಂಭದಲ್ಲಿ ಮಳೆರಾಯನ ಆಗಮನವಾಗಿತ್ತು. ಈಗ ಬಿತ್ತನೆ ಆರಂಭಿಸುತ್ತಿದ್ದಂತೆ ಸುಳಿಯುತ್ತಿಲ್ಲ. ಸದ್ಯ ಹೆಸರು, ತೊಗರಿ, ಮೆಕ್ಕಜೋಳ ಬಿತ್ತನೆಯಾಗಿದ್ದು, ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ.
ತಾಲೂಕಿನಾದ್ಯಂತ ಮುಂಗಾರಿನ ಬಿತ್ತನೆ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಹೆಸರು, ತೊಗರಿ ಹಾಗೂ ಮೆಕ್ಕೆಜೋಳ ಬಿತ್ತನೆಯಾಗಿದೆ. ಇನ್ನೂ ಆಷಾಢ ಆರಂಭ ಹಂತದಲ್ಲಿಯೇ ವೇಗವಾಗಿ ಗಾಳಿ ಬೀಸುತ್ತಿದೆ. ಇದರಿಂದ ಮಳೆಯ ಸುಳಿವು ಇಲ್ಲದಂತಾಗಿದೆ. ಬಿತ್ತನೆ ಮಾಡಿದ ಬೆಳೆ ಮೊಳಕೆಯಲ್ಲಿ ಬಾಡಿ ನಿಂತಿತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ರೈತರು ಉತ್ತಮ ಮಳೆ ನಿರೀಕ್ಷೆ ಹೊಂದಿದ್ದರು. ಅದೇ ರೀತಿ ಪೂರ್ವ ಮುಂಗಾರಿನ ಮಳೆ ಕೂಡ ಉತ್ತಮವಾಗಿ ಬಂದಿದ್ದು, ಬಿತ್ತನೆ ಸಮಯಕ್ಕೆ ಕೃತಿಕಾ ಮಳೆ ಬಂದರೂ ಸಹ ಪೂರ್ಣ ಪ್ರಮಾಣದಲ್ಲಿ ಬರಲಿಲ್ಲ. ಆದರೆ, ಮೃಗಶಿರ, ಆರಿದ್ರ ಮಳೆ ಸಂಪೂರ್ಣ ಕೈಕೊಟ್ಟಿವೆ. ಕೃತಿಕಾ ಮಳೆಗೆ ಹೆಸರು ಬಿತ್ತನೆ ಮಾಡಿದ್ದು, ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಒಣಗಲು ಆರಂಭಗೊಂಡಿದೆ. ಇನ್ನು ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದು, ಮೊಳಕೆಗಳು ಮೇಲೆ ಬಾರದ ಸ್ಥಿತಿ ಇದೆ. ಸದ್ಯ ಮಳೆ ಬಂದರೇ ಮಾತ್ರ ಬಿತ್ತನೆ ಮಾಡಿದ ಖರ್ಚು ಮರಳಿ ಬರಬಹುದು. ಇಲ್ಲವಾದರೇ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ಉದ್ಭವಿಸಿದೆ.
ಅಲ್ಲದೇ ಇನ್ನೂ ಕೆಲ ರೈತರು ಮುಂಗಾರು ಬಿತ್ತನೆಗೆ ಮೆಕ್ಕೆಜೋಳ, ಗೊಬ್ಬರ ಖರೀದಿ ಮನೆಯಲ್ಲಿ ಇಟ್ಟುಕೊಳ್ಳುವ ಸ್ಥಿತಿ ಒದಗಿದೆ. ಮಳೆ ಬಂದರೇ ಬಿತ್ತನೆ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಆದರೆ, ಮಳೆಯು ಇತ್ತ ಸುಳಿಯುತ್ತಿಲ್ಲ. ವೇಗವಾದ ಗಾಳಿ ಬೀಸುತ್ತಿದ್ದು, ಮೋಡಗಳು ನಿಲ್ಲುತ್ತಿಲ್ಲ.
ಗುರಿ ಮೀರಿ ಬಿತ್ತನೆ : ಕೃಷಿ ಇಲಾಖೆಯು ಗುರಿ ಮೀರಿ ಬಿತ್ತನೆಯಾಗಿದ್ದು, ಕುಕನೂರು ಹೋಬಳಿ ವ್ಯಾಪ್ತಿಯಲ್ಲಿ 13,516 ಹೆಕ್ಟೇರ್ ಗುರಿ ನಿಗದಿಯಾಗಿದ್ದು, ಇದರಲ್ಲಿ 14,696 ಹೆಕ್ಟೇರ್ ಬಿತ್ತನೆಯಾಗಿದೆ. ಮಂಗಳೂರು ಹೋಬಳಿ ವ್ಯಾಪ್ತಿಯಲ್ಲಿ 13,516 ಹೆಕ್ಟೇರ್ ಗುರಿ ನಿಗದಿಯಾಗಿದ್ದು, 14,996 ಹೆಕ್ಟೇರ್ ಬಿತ್ತನೆಯಾಗಿದೆ.
===========
ಕೋಟ್
ಮೆಕ್ಕೆಜೋಳ, ಹೆಸರು ಬಿತ್ತನೆ ಮಾಡಲಾಗಿದೆ. ಆದರೆ ಮಳೆ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಸಾಕಷ್ಟು ನಿರೀಕ್ಷೆಯಿಂದ ಬಿತ್ತನೆ ಮಾಡಿದ್ದು, ಪ್ರತಿ ಎಕರೆಗೆ ಸುಮಾರು 8 ರಿಂದ 10 ಸಾವಿರ ಖರ್ಚು ಮಾಡಲಾಗಿದೆ. ಮಳೆ ಬಂದರೇ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆ ಕೈಗೆ ಬರುತ್ತದೆ. ಇಲ್ಲವಾದರೇ ಕಷ್ಟ.
ಮುತ್ತಣ್ಣ ಕವಲೂರು
ರೈತ ಭಾನಾಪುರ
===========
ಕೋಟ್
ಮುಂಗಾರು ಆರಂಭದಲ್ಲಿ ಉತ್ತಮವಾಗಿ ಸುರಿದ ಪರಿಣಾಮ ಹೆಚ್ಚು ಬಿತ್ತನೆಯಾಗಿದೆ. ಮಳೆ ಬರುವ ನಿರೀಕ್ಷೆ ಇದೆ. ಹೆಸರು, ಮೆಕ್ಕೆಜೋಳ, ತೊಗರಿ ಬಿತ್ತನೆ ಮಾಡಿದ್ದಾರೆ.
ಬಸವರಾಜ ತೇರಿನ್