ತಾಯಿ-ಮಕ್ಕಳ ಆಸ್ಪತ್ರೆಗೆ ಸೌಲಭ್ಯ ಒದಗಿಸಿ: ಕುಕನೂರಿನಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನೆ

31KKNR-01
Published on

ಕುಕನೂರು: ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು.

ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ಮಾತನಾಡಿ, ಕುಕನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ ಕಾಳಜಿ ವಹಿಸುತ್ತಿಲ್ಲ. ಸಚಿವರು ಕೂಡಲೇ ಆಸ್ಪತ್ರೆಯ ಉದ್ಘಾಟನೆ ಮಾಡಿ ವೈದ್ಯರನ್ನು ನೇಮಿಸಬೇಕು. ಮಾತೃ ಇಲಾಖೆಯ ಬಗ್ಗೆ ಕಾಳಜಿ ವಹಿಸಿ ಮಕ್ಕಳು ಹಾಗೂ ತಾಯಂದಿರನ್ನು ಉಳಿಸಬೇಕು. ಸೂಕ್ತ ಚಿಕಿತ್ಸೆ ದೊರಕದೇ ಹೆಣ್ಣು ಮಗುವಿಗೆ ಜನ್ಮವಿಟ್ಟು ಪ್ರಾಣತೆತ್ತ ಉಮಾ ಚಲವಾದಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿ, ಬಸವರಾಜ ರೆಡ್ಡಿ ಅವಧಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಚಿವ ಹಾಲಪ್ಪ ಆಚಾರ್ ಇನ್ನೂ ಉದ್ಘಾಟನೆ ಮಾಡದಿರುವುದು ಖಂಡನೀಯ. ಬಡ ರೋಗಿಗಳಿಗೆ ಉಪಯುಕ್ತವಾಗುವಂತಹ ಆಸ್ಪತ್ರೆಗೆ ವೈದ್ಯರ ನೇಮಕ ಹಾಗೂ ಮೂಲ ಸೌಕರ್ಯ ಒದಗಿಸಿಲ್ಲ. ಪಟ್ಟಣದಲ್ಲಿ ದೊಡ್ಡ ಆಸ್ಪತ್ರೆಯಿದ್ದರೂ ಹೆರಿಗೆ ಬಳಿ ಮಹಿಳೆ ಸಾವಿಗೀಡಾಗಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ದೂರಿದರು. ನಂತರ ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ ಹಾಗೂ ಡಿಎಚ್‌ಲ ಅಲಕಾನಂದ ಮಳಗಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಮಹಿಳಾ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ, ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ, ಕುಕನೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಫರೀದಾ ಬೇಗಂ, ಯಲಬುರ್ಗಾ ಬ್ಲಾಕ್ ಅಧ್ಯಕ್ಷೆ ಸಾವಿತ್ರಿ ಗೊಲ್ಲರ್, ಪದಾಧಿಕಾರಿಗಳಾದ ವಿಜಯಲಕ್ಷ್ಮೀ, ಗೀತಾ ಜಂಗ್ಲಿ, ರಾಧಾ ದೊಡ್ಮನಿ, ಕುಸುಮ ಕಳ್ಳಿಮನಿ, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಕುಕನೂರ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಚಂಡೂರ, ನಗರ ಘಟಕ ಅಧ್ಯಕ್ಷ ರೆಹಮಾನಸಾಬ್ ಮಕ್ಕಪ್ಪನವರ್, ಪಪಂ ಸದಸ್ಯ ಗಗನ ನೋಟಗಾರ, ಮುಖಂಡರಾದ ಸಿದ್ದಯ್ಯ ಕಳ್ಳಿಮಠ, ವಕ್ತಾರ ಸಂಗಮೇಶ್ ಗುತ್ತಿ ಮಂಜುನಾಥ ಯಡಿಯಾಪುರ, ರವಿ ಭಜಂತ್ರಿ, ನಿಂಗಪ್ಪ ಗೊರ್ಲೆಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net