ನ್ಯಾನೊ ಡಿಎಪಿ ಸಿಂಪಡಣೆಯಿಂದ ಉತ್ತಮ ಬೆಳೆ

23KKNR-04
Published on

ಕುಕನೂರು: ನ್ಯಾನೊ ಗೊಬ್ಬರವನ್ನು ಬೆಳೆಗಳ ಎಲೆಗಳ ಮೇಲೆ ಸಿಂಪಡಣೆ ಮಾಡುವುದುರಿಂದ ಪೋಷಕಾಂಶದ ಸದ್ಬಳಕೆಯಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಟಿ.ರುದ್ರೇಶಪ್ಪ ಹೇಳಿದರು.

ತಾಲೂಕಿನ ಮಂಗಳೂರು ಗ್ರಾಮದಲ್ಲಿ ಕೃಷಿ ಇಲಾಖೆ, ಪ್ರಾಥಮಿಕ ಸಹಕಾರ ಸಂಘ ಮತ್ತು ಇಪ್ಕೊ ಸಂಸ್ಥೆಯ ಆಶ್ರಯದಲ್ಲಿ ಶರಣಪ್ಪ ಗಾಣಿಗೇರ ಇವರ ಜಮೀನಲ್ಲಿ ಮೆಕ್ಕೆಜೋಳ ಬೆಳೆಗೆ ಡ್ರೋನ್ ಮೂಲಕ ನ್ಯಾನೊ ಯೂರಿಯಾ ಸಿಂಪರಣೆ ಪ್ರಾತ್ಯಕ್ಷಿಗೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಸಾಮಾನ್ಯ ರಸಗೊಬ್ಬರ ಬಳಕೆಯಿಂದ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯಲು ಅನುಕೂಲವಾಗಲಿದೆ. ನ್ಯಾನೊ ಯೂರಿಯೂ ಮತ್ತು ನ್ಯಾನೊ ಡಿಎಪಿ ಸಿಂಪಡಣೆಯಿಂದ ಉತ್ತಮ ಬೆಳೆ ಪಡೆಯಬಹುದು ಎಂದರು.

ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್ ತುಂಬಳ ಮಾತನಾಡಿ, ನ್ಯಾನೊ ಯೂರಿಯಾ ಶೇ.20 ಸಾರಜನಕ ಹೊಂದಿದೆ. ನ್ಯಾನೊ ಡಿಎಪಿ ಶೇ.8 ಸಾರಜನಕ ಮತ್ತು ಶೇ.16 ರಂಜಕ ಹೊಂದಿದೆ. ಹೀಗಾಗಿ ಬೆಳೆಗಳ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಪೋಷಕಾಂಶ ಒದಗಿಸಿ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಡ್ರೋನ್ ಮೂಲಕ ಸಿಂಪಡಿಸಿದರೆ ಶೇ.80 ಬೆಳೆಗಳಿಗೆ ತಲುಪಲಿದ್ದು, ಕಡಿಮೆ ಖರ್ಚು, ಕಡಿಮೆ ಶ್ರಮದ ಮೂಲಕ ಹೆಚ್ಚು ಬೆಳೆಗಳಿಗೆ ತಲುಪಲಿದೆ ಎಂದರು.

ಕೃಷಿ ಅಧಿಕಾರಿ ನಿಂಗಪ್ಪ, ಪ್ರಾಕೃಸ ಸಂಘದ ಅಧ್ಯಕ್ಷ ಶರಣಪ್ಪ ಹ್ಯಾಟಿ, ಕಾರ್ಯದರ್ಶಿ ಹನಮಗೌಡ ಈಳಿಗೇರ, ನಿರ್ದೇಶಕ ಶಂಕ್ರಪ್ಪ ಉಳ್ಳಾಗಡ್ಡಿ, ಇಫ್ಕೋ ಕಂಪನಿಯ ರಾಘವೇಂದ್ರ, ರುದ್ರಗೌಡ ಪಾಟೀಲ್, ಶರಣಪ್ಪ ಬಳಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net