

ಕುಕನೂರು: ಮುಂದಿನ ವರ್ಷ ಜ.12 ರಿಂದ 22ರವರೆಗೆ ಮಹಾದೇವ ದೇವರ ಪಟ್ಟಾಧಿಕಾರ ಸಮಾರಂಭ ನಡೆಯಲಿದೆ. ಕಾರ್ಯಕ್ರಮ ಯಶಸ್ಸಿಗೆ ಭಕ್ತರು ಸಹಕಾರ ನೀಡಬೇಕೆಂದು ಮುಂಡರಗಿಯ ನಾಡೋಜ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಅನ್ನದಾನೇಶ್ವರ ಶಾಖಾ ಮಠದಲ್ಲಿ ಮಹಾದೇವ ದೇವರ ಪಟ್ಟಾಧಿಕಾರದ ‘ನಿರಂಜನ ಮಹೋತ್ಸವ’ ಆಮಂತ್ರಣ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶನಿವಾರ ಮಾತನಾಡಿದರು. ಚಿಕ್ಕವಯಸ್ಸಿನಲ್ಲಿ ಮಠದ ಜವಾಬ್ದಾರಿ ವಹಿಸಿಕೊಂಡಿರುವ ಮಹಾದೇವ ದೇವರು, ಈ ಭಾಗದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಕ್ತರ ಪ್ರೀತಿ ಗೌರವಗಳಿಸಿದ್ದಾರೆ. ಶಾಖಾಮಠದಲ್ಲಿ ಹಲವಾರು ವರ್ಷಗಳಿಂದ ಸೇವೆ ಮಾಡಿ ಪಟ್ಟಾಧಿಕಾರ ವಹಿಸಿಕೊಳ್ಳುತ್ತಿರುವುದು ಅವರ ಸೇವೆಯ ಫಲವಾಗಿದೆ. ಆದ್ದರಿಂದ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಭಕ್ತ ಸಮೂಹ ಸಹಕಾರ ನೀಡಬೇಕೆಂದು ಕೋರಿದರು.
ರಾಘವಾನಂದ ಮಠದ ಆತ್ಮಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಮಹಾದೇವ ದೇವರು ಸರಳತೆಯ ಸಾಕಾರಮೂರ್ತಿ. ಕುಕನೂರ ಮಠಕ್ಕೆ ಪಟ್ಟಾಧಿಕಾರ ವಹಿಸುತ್ತಿರುವುದು ಸಂತಸದ ಸಂಗತಿ. ಅವರಿಂದ ಧರ್ಮ ಪ್ರಸಾರದೊಂದಿಗೆ ಮಠ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು. ಪ್ರಮುಖರಾದ ರಶೀದ್‌ಸಾಬ್ ಅಣಜಿಗೇರಿ, ಶಂಭಣ್ಣ ಜೋಳದ, ಗದಿಗೆಪ್ಪ ಪವಾಡಶೆಟ್ಟಿ, ಪಪಂ ಸದಸ್ಯರಾದ ಬಸವರಾಜ ಗಾಳಿ, ಚಂದ್ರು ಆರಬೆರಳಿನ, ಗಗನ ನೋಟಗಾರ, ಶೇಖಪ್ಪ ಶಿರೂರ, ಪ್ರಭು ಶಿವಸಿಂಪರ, ಯಲ್ಲಪ್ಪ ಹೊಸಮನಿ, ಕಾಸಿಂಸಾಬ್ ಸಂಗಟಿ, ಶಿವಶಂಕ್ರಯ್ಯ ಲಕ್ಕುಂಡಿಮಠ, ಮಹೇಶ ಕಲ್ಮಠ, ಅಬ್ದುಲ್ ಸಾಬ್ ತಳಕಲ್, ಕಳಕಪ್ಪ ಕುಂಬಾರ ಇತರರಿದ್ದರು.