ಶಾಲೆ, ಭವನಕ್ಕೆ ಗವಿಮಠದಿಂದ ಭೂ ದಾನ

land transfer
ಕೊಪ್ಪಳ ಗವಿಮಠದಲ್ಲಿ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕುಕನೂರು ತಾಲೂಕಿನ ಭಾನಾಪುರದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನೀಡಿದ ಭೂ ದಾಖಲೆಗಳನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಿದರು. ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಶಿವಶಂಕರ, ಪ್ರಮುಖರಾದ ನಿಂಗನಗೌಡ ಡಂಬಳ, ಶಂಕ್ರಪ್ಪ ಚೌಡ್ಕಿ, ಕಲ್ಯಾಣಪ್ಪ ಕುಂಬಾರ ಇದ್ದರು.
Published on

ಕುಕನೂರು: ಕೊಪ್ಪಳ ಗವಿಮಠದಿಂದ ಕೋಟ್ಯಂತರ ರೂ. ಬೆಲೆಯ ಭೂಮಿಯನ್ನು ಸರ್ಕಾರಿ ಪ್ರೌಢಶಾಲೆ ಹಾಗೂ ಬುದ್ಧ-ಬಸವ-ಅಂಬೇಡ್ಕರ್ ಭವನ ನಿರ್ಮಾಣಕ್ಕೆ ದಾನ ಮಾಡುವ ಮೂಲಕ ಗವಿ ಶ್ರೀಗಳು ಭಾನಾಪುರ ಗ್ರಾಮಸ್ಥರ ಮನವಿ ಸ್ಪಂದಿಸಿದ್ದಾರೆ.

ಕುಕನೂರು ತಾಲೂಕಿನ ಭಾನಾಪುರದಲ್ಲಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗವಿ ಶ್ರೀಗಳು ಶ್ರೀಮಠದ ಭೂಮಿಯನ್ನು ಶನಿವಾರ ಸರ್ಕಾರದ ಹೆಸರಿಗೆ ಹಸ್ತಾಂತರಿಸಿದ್ದಾರೆ. ಗ್ರಾಮದಲ್ಲಿ ಗವಿಮಠಕ್ಕೆ ಸೇರಿದ 68ಎಕರೆ ಭೂಮಿ ಇದೆ. 1994ರಲ್ಲಿ 2.6ಗುಂಟೆ ಜಾಗವನ್ನು ಸರ್ಕಾರಿ ಪ್ರೌಢ ಶಾಲೆಗೆ ನೀಡಿದ್ದರು. ಈಗ ಬುದ್ಧ-ಬಸವ-ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 27ಗುಂಟೆ ನೀಡಿದ್ದಾರೆ. ಶ್ರೀಮಠದಲ್ಲಿ ಎರಡು ಜಾಗದ ಹಸ್ತಾಂತರವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಸರ್ಕಾರದ ಹೆಸರಿಗೆ ರುಜು ಮಾಡುವ ಮೂಲಕ ಭೂಮಿಯನ್ನು ಹಸ್ತಾಂತರಿಸಿದರು.

1994ರಲ್ಲಿ ಸರ್ಕಾರಿ ಪ್ರೌಢ ಶಾಲೆಗೆ ಬೇಕಾಗಿದ್ದ ಭೂಮಿ ನೀಡಿದ್ದರು. ಆದರೆ, ದಾಲೆಗಳನ್ನು ನೀಡಿರಲಿಲ್ಲ ಆದ್ದರಿಂದ 3ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬುದ್ಧ-ಬಸವ-ಅಂಬೇಡ್ಕರ್ ಭವನಕ್ಕೆ ಭೂಮಿ ಹಾಗೂ ದಾಖಲಾತಿಗಳನ್ನು ಹಸ್ತಾಂತರಿಸಿದರು.

ಭಾನಾಪುರ ಗ್ರಾಮವೂ ಕೊಪ್ಪಳ-ಹುಬ್ಬಳ್ಳಿ ಹಾಗೂ ಭಾನಾಪುರ-ಗದ್ದನಕೇರಿ ಹೆದ್ದಾರಿಗೆ ಹೊಂದಿದ್ದು, ರೈಲ್ವೆ ಹಳಿ ನಿರ್ಮಾಣವಾಗುತ್ತಿದೆ. ಸಮೀಪದಲ್ಲಿಯೇ ಇಂಜಿನಿಯರಿಂಗ್ ಕಾಲೇಜು, ಕೌಶಲ ಅಭಿವೃದ್ಧಿ ಕೇಂದ್ರ, ಆಟಿಕೆ ಕ್ಲಸ್ಟರ್ ಕೈಗಾರಿಗೆ ಸ್ಥಾಪನೆ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ ಕೋಟಿ ರೂ. ಬೆಲೆ ಇದೆ. ಸರ್ಕಾರಿ ಪ್ರೌಢ ಶಾಲೆಯ ಎದುರು ಇರುವ ಗವಿಮಠದ ಜಾಗದಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಭವನ ನಿರ್ಮಾಣದಿಂದ ಜನರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಶ್ರೀಗಳಿಗೆ ಮನವಿ ಮಾಡಿ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದರು. ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಶ್ರೀಗಳು ಭೂದಾನ ಮಾಡಿದ್ದಾರೆ.

ಅಲ್ಲದೇ ಗ್ರಾಮದಲ್ಲಿರುವ ಗವಿಮಠದ ಭೂಮಿಯಲ್ಲಿ ಅನೇಕ ರೈತರು ಇಂದಿಗೂ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಗವಿಮಠದ ನೆಲ ಅನ್ನದಾತರಿಗೆ ನೆರವಾಗಿದೆ. ಪ್ರೌಢಶಾಲೆಗೆ ಭೂದಾನ ಮಾಡಿದ ಗವಿಮಠದ ಶ್ರೀಗಳ ಹೆಸರನ್ನು ನಾಮಕರಣ ಮಾಡುವುದು ಗ್ರಾಮಸ್ಥರ ಆಶಯವಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾಗವೇಣಿ, ತಾಲೂಕು ಅಧಿಕಾರಿ ಶಿವಶಂಕರ, ಪ್ರಮುಖರಾದ ನಿಂಗನಗೌಡ ಡಂಬಳ, ಶಂಕ್ರಪ್ಪ ಚೌಡ್ಕಿ, ಕಲ್ಯಾಣಪ್ಪ ಕುಂಬಾರ, ಕಲ್ಲಯ್ಯ ಗೊಂಡಬಾಳ, ರಹಿಮಾನ್‌ಸಾಬ್ ನದಾಫ್, ಮೃತ್ಯುಂಜಯ ಮಠದ, ವಿಶ್ವನಾಥ ಮಠದ, ಆನಂದ ಲಕಮಾಪುರಮಠ ಇತರರಿದ್ದರು.

ಗ್ರಾಮದಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಭವನ ನಿರ್ಮಾಣಕ್ಕೆ 3 ಕೋಟಿ ರೂ. ಬಿಡುಗಡೆಯಾಗಿದ್ದು, ಶಾಸಕ ಬಸವರಾಜ ರಾಯರಡ್ಡಿ ಭೂಮಿ ಪರಿಶೀಲಿಸಿ ಗವಿಮಠದ ಜಾಗದಲ್ಲಿ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದಿದ್ದರು. ಹೀಗಾಗಿ ಗ್ರಾಮಸ್ಥರು ಅಭಿನವ ಗವಿಶ್ರೀಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶ್ರೀಗಳು ಭೂಮಿ ದಾನ ನೀಡಿದ್ದಾರೆ.

ಶಶಿಧರಯ್ಯ ಕುಡ್ಲೆಪ್ಪನವರ, ಗ್ರಾಮಸ್ಥ, ಭಾನಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net