ಕೊಪ್ಪಳ ಜಿಲ್ಲೆಗೆ ನೂರು ಹಾಸಿಗೆ 3 ಆಸ್ಪತ್ರೆ ಮಂಜೂರು

DINESH GUNDURAW
ಕುಕನೂರು ತಾಲೂಕಿನ ಬಳಗೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಸಮಾರಂಭವನ್ನು ಸಚಿವ ದಿನೇಶ ಗುಂಡೂರಾವ್ ಉದ್ಘಾಟಿಸಿದರು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಡಿಎಚ್‌ಒ ಟಿ.ಲಿಂಗರಾಜ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಬಿ.ಎಸ್ ಪಾಟೀಲ್, ಉಪ ತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿ, ಪ್ರಮುಖರಾದ ವೀರನಗೌಡ ಬಳೂಟಗಿ, ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರು ಇದ್ದರು.
Published on

ಕುಕನೂರು: ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಕೊಪ್ಪಳ ಜಿಲ್ಲೆಗೆ ನೂರು ಹಾಸಿಗೆ ಮೂರು ಆಸ್ಪತ್ರೆ ಮಂಜೂರು ಮಾಡಿದ್ದು, ಇದರಲ್ಲಿ ಒಂದು ಕುಕನೂರು ಪಟ್ಟಣ ಸೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ತಾಲೂಕಿನ ಬಳಗೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ, ಸಣ್ಣ ನೀರಾವರಿ ಇಲಾಖೆಯ ಬಳಗೇರಿ-ಬೂದಗುಂಪ ಮಧ್ಯದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ಶಂಕುಸ್ಥಾಪನೆ, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.

ಕುಕನೂರಿನ 30 ಬೆಡ್ ಆಸ್ಪತ್ರೆಯನ್ನು 100 ಬೆಡ್ ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಎರಡು ವರ್ಷದೊಳಗೆ ಕಟ್ಟಡ ನಿರ್ಮಾಣವಾಗಬೇಕಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಆರೋಗ್ಯ ರಕ್ಷಣೆಗಾಗಿ 850 ಕೋಟಿ ರೂ. ಮೀಸಲಿಡಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಾರಿಗೊಳಿಸಲಾದ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಸಿಎಂ ಕ್ಷೇತ್ರ ಆಗದಷ್ಟು ಅಭಿವೃದ್ಧಿಯನ್ನು ಬಸವರಾಜ ರಾಯರೆಡ್ಡಿ ಕ್ಷೇತ್ರ ಕಂಡಿದೆ. ಇದು ಅವರು ಅಭಿವೃದ್ಧಿ ಪರ ಯೋಜನೆ ರೂಪಿಸುವ ಚಿಂತನೆಯಿಂದ ಸಾಧ್ಯವಾಗಿದೆ ಎಂದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಆಗುತ್ತಿವೆ. ಗ್ಯಾರಂಟಿಗಳಿಂದ ವಿಪಕ್ಷಗಳಿಗೆ ತಳಮಳ ಶುರುವಾಗಿದೆ. ಕುಕನೂರಿನ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ 42 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.

ಡಿಎಚ್‌ಒ ಟಿ.ಲಿಂಗರಾಜ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಬಿ.ಎಸ್ ಪಾಟೀಲ್, ಉಪತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿ, ಪ್ರಮುಖರಾದ ವೀರನಗೌಡ ಬಳೂಟಗಿ, ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರು, ಕೆರಿಬಸಪ್ಪ ನಿಡಗುಂದಿ, ಅಶೋಕ ತೋಟದ, ಈರಪ್ಪ ಕುಡಗುಂಟಿ, ಯಂಕಣ್ಣ ಯರಾಶಿ, ಚಂದ್ರಶೇಖರಯ್ಯ ಹಿರೇಮಠ, ನಾರಾಯಣಪ್ಪ, ಹನುಮೇಶ ಕಡೇಮನಿ, ಮಂಜುನಾಥ ಕಡೇಮನಿ, ಫರೀದಾ ಬೇಗಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net