

ಕುಕನೂರು: ತಾಲೂಕಿನ ಇಟಗಿ ಗ್ರಾಮದ ನನ್ನ ಜಮೀನಿಗೆ ಸರ್ವೇ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಆಗಮಿಸಿ ಜಮೀನನ್ನು ಅಳತೆ ಮಾಡಿಕೊಂಡು ಹೋಗಿದ್ದಾರೆ. ಇದರ ಬಗ್ಗೆ ಶಾಸಕರು, ಮೇಲಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ರೈತ, ಗ್ರಾಪಂ ಮಾಜಿ ಅಧ್ಯಕ್ಷ ಹನುಮಪ್ಪ ಸಂಗಟಿ ಒತ್ತಾಯಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನನ್ನ ಜಮೀನಿಗೆ ಏಕಾಏಕಿ ಆಗಮಿಸಿದ ಸರ್ವೇ ಇಲಾಖೆ ಅಧಿಕಾರಿ ಹಾಗೂ ಪಿಡಿಒ ಅವರು ನನಗೆ ನೋಟಿಸ್, ಮಾಹಿತಿ ನೀಡದೇ ಜಮೀನಿನ ಸರ್ವೇ ನಂ.498ರ 6.25 ಎಕರೆ ಜಮೀನಿನನ್ನು ಸರ್ವೇ ಮಾಡಿಕೊಂಡು ಹೋಗಿದ್ದಾರೆ. ಯಾವ ಕಾರಣಕ್ಕೆ ಸಮೀಕ್ಷೆ ಮಾಡಿದ್ದೀರಿ ಎಂದು ಕೇಳಿದರೂ ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಿಗಳು ರೈತರಿಗೆ ಸಮಸ್ಯೆ ಮಾಡುತ್ತಿದ್ದಾರೆ. ಇದರ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಷ್ಟತೆ ನೀಡಿ, ಕ್ರಮ ತೆಗೆದುಕೊಳ್ಳಬೇಕು ಎಂದರು.
ನಮ್ಮ ಗ್ರಾಮದಲ್ಲಿ 2024-25ನೇ ಸಾಲಿನಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ 2 ಕೋಟಿ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿದೆ. ನಾನು ಅದಕ್ಕೆ ತಕರಾರು ಮಾಡಿಲ್ಲ. ಸಿಸಿ ರಸ್ತೆ ಕಾಮಗಾರಿಗೆ ಅಡ್ಡಪಡಿಸಿದ್ದೇನೆಂದು ಅಧಿಕಾರಿಗಳು ನನ್ನ ಮೇಲೆ ದೂರು ನೀಡಿದ್ದಾರೆ. ಇದು ಸರಿಯಲ್ಲ, ಇದು ಮುಂದುವರಿದರೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದರು.
ಪ್ರಮುಖ ಮಹೇಶ ದೊಡ್ಡಮನಿ ಮಾತನಾಡಿ, ಇಟಗಿ ಗ್ರಾಮದಲ್ಲಿ 1995-96ನೇ ಸಾಲಿನಲ್ಲಿ ಆಶ್ರಯ ಯೋಜನೆಯಡಿ 5.1 ಎಕರೆಯಲ್ಲಿ ಒಟ್ಟು 113 ಪ್ಲಾಟ್‌ಗಳು ನೀಡಲಾಗಿತ್ತು. ಬಡವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನೀಡಿರುವ ಆಶ್ರಯ ಪ್ಲಾಟ್‌ಗಳಲ್ಲಿ ಅಂದು ಸರ್ಕಾರಿ ನೌಕರರಿಗೆ, ಪ್ರಭಾವಿ ಮುಖಂಡರಿಗೆ ಎರಡರಿಂದ ಮೂರು ಪ್ಲಾಟ್‌ಗಳನ್ನು ನೀಡಿ, ಅಕ್ರಮ ಎಸಗಲಾಗಿತ್ತು. ಸದ್ಯ 40 ರಿಂದ 45 ಜನರು ಪ್ಲಾಟ್‌ಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಈವರೆಗೆ ಜಾಗಕ್ಕೆ ಸಂಬಂಧಿಸಿದ ನಿಖರ ದಾಖಲೆಗಳಿಲ್ಲ. ಪಂಚಾಯಿತಿಗಳಲ್ಲಿ ದಾಖಲೆ ನಿರ್ಮಾಣವಾಗುತ್ತಿವೆ. ಇಂತಹ ಅನೇಕ ಸಮಸ್ಯೆಗಳು ಗ್ರಾಮದಲ್ಲಿ ಇವೆ ಎಂದರು.