

ಪ್ರಾಣಾಪಾಯದಿಂದ ಪಾರಾದ ನಿವಾಸಿಗಳು | ಸದ್ಯಕ್ಕಿಲ್ಲ ಇರಲು ಸೂರು
ಕುಕನೂರು: ಕಳೆದ ಎರಡು ದಿನದಿಂದ ಸುರಿದ ಜಿಟಿ ಜಿಟಿ ಮಳೆಗೆ ಪಟ್ಟಣದಲ್ಲಿ ನಾಲ್ಕು ಮನೆಗಳು ಕುಸಿದಿವೆ.
ಪಟ್ಟಣದ 6ನೇ ವಾರ್ಡ್‌ನ ಲಕ್ಷ್ಮವ್ವ ತಹಸೀಲ್ದಾರ್, 7ನೇ ವಾರ್ಡ್‌ನ ಈರಮ್ಮ ಯಲ್ಲಪ್ಪ ಕರಿಗಾರ, ಬಸಮ್ಮ ಬಸಪ್ಪ ಕರಿಗಾರ, ಕೋಳಿಪೇಟೆಯ ರಮೇಶ ಅಕ್ಕಿ ವಾಸವಿದ್ದ ಮಣ್ಣಿನ ಮನೆಗಳು ಶುಕ್ರವಾರ ಬೆಳಗ್ಗೆ ಜಿಟಿ ಜಿಟಿ ಮಳೆಗೆ ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ದವಸ, ಧಾನ್ಯ, ಬಟ್ಟೆ, ಸಾಮಗ್ರಿಗಳು ಹಾಳಾಗಿವೆ. ಅಲ್ಲದೆ ಸದ್ಯ ಇವರುಗಳ ಮನೆ ಕುಸಿದ ಪರಿಣಾಮ ಇವರಿಗೆ ಸದ್ಯ ಇರಲು ಸೂರಿಲ್ಲದಂತಾಗಿದೆ.
ಸ್ಥಳಕ್ಕೆ ಪಪಂ ಸಿಬ್ಬಂದಿ ಬಸವರಾಜ ಆರಬೆರಳಿನ್, ಗ್ರಾಮಲೆಕ್ಕಾಧಿಕಾರಿ ಸುರೇಶ ಕ್ಯಾದಗುಂಪಿ, ಪಪಂ ಸದಸ್ಯ ಕನಕಪ್ಪ ಬ್ಯಾಡರ್, ಮುಖಂಡ ಗಗನ ನೋಟಗಾರ ಮನೆ ಕುಸಿತ ಬಗ್ಗೆ ಮಾಹಿತಿ ಪಡೆದು ಮೇಲಧಿಕಾರಿಗಳ ಗಮನಕ್ಕೆ ತಂದು, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಮೂಲಕ ಪರಿಹಾರ ನೀಡಲಾಗುತ್ತಿದ್ದು. ಸ್ಥಳೀಯ ವರದಿ ಕೂಡಲೇ ಮೇಲಧಿಕಾರಿಗಳಿಗೆ ಕಳಿಸಲಾಗುವುದು ಎಂದು ಗ್ರಾಮಲೆಕ್ಕಾಧಿಕಾರಿ ಸುರೇಶ ಕ್ಯಾದಗುಂಪಿ ತಿಳಿಸಿದ್ದಾರೆ.
ಕುಸಿದ ಮನೆಗಳಿಗೆ ಶೀಘ್ರ ಪಪಂ ಮನೆ ಮಂಜೂರು ಮಾಡಬೇಕು. ಕೂಡಲೇ ಶಾಸಕರು ಹಾಗೂ ಜಿಲ್ಲಾಡಳಿತ ಮನೆ ಕುಸಿದ ಪ್ರತಿಯೊಬ್ಬರಿಗೂ ಮನೆ ಮಂಜೂರು ಮಾಡಿ ಆಸರೆ ಆಗಬೇಕು. | ಗಗನ ನೋಟಗಾರ, ಮುಖಂಡ, ಕುಕನೂರು