

ಕುಕನೂರು: ಒಂದೆರೆಡು ಸಾಲಿನಲ್ಲಿ ವಿಶಾಲ ಅರ್ಥ ನೀಡುವ ಹನಿಗವನ ಆಹ್ಲಾದಕಾರ ಭಾವನೆ ಮೂಡಿಸಲಿದೆ ಎಂದು ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಗದಗಿನ ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಕುಕನೂರಿನ ಸಾಹಿತಿ ಹಾಗೂ ಉಪನ್ಯಾಸಕ ಭೋಜರಾಜ ಸೊಪ್ಪಿಮಠ ಅವರು ರಚಿಸಿರುವ ‘ಬಾ ನಲ್ಲೆ’ ಹನಿಗವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಒಂದು ವಿಷಯದ ಕುರಿತು ಕೆಲವೇ ಪದಗಳಲ್ಲಿ ಹನಿಗವನಗಳ ರೂಪದಲ್ಲಿ ಸೆರೆಹಿಡಿಯುವುದು ಅದ್ಭುತ ಕಲೆಯಾಗಿದೆ. ಈ ನಿಟ್ಟಿನಲ್ಲಿ ಸೊಪ್ಪಿಮಠ ತುಂಬಾ ಅರ್ಥಪೂರ್ಣವಾದ ಮತ್ತು ಮನಸ್ಸಿಗೆ ಕಚಗುಳಿ ಇಡಬಲ್ಲ ಹನಿಗವನ ರಚಿಸಿದ್ದಾರೆ. ಒಬ್ಬ ಕವಿಯಾದವನಿಗೆ ಭಾಷಾ ಪಾಂಡಿತ್ಯವಿರಬೇಕು ಎಂದರು.
ಚಮತ್ಕಾರದ ರೀತಿಯಲ್ಲಿ ಶಬ್ಧಗಳನ್ನು ಬಳಸಿಕೊಳ್ಳುವ ಜಾಣ್ಮೆ ಅಗತ್ಯ. ಹೇಳಬೇಕಾದ ವಿಷಯವನ್ನು ಕೆಲವೇ ಪದಗಳಲ್ಲಿ ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ನೇರವಾಗಿ ಹೇಳಬೇಕು. ಹಾಗಾದಾಗಲೇ ಆತನೊಬ್ಬ ಯಶಸ್ವಿ ಕವಿಯಾಗಲು ಸಾಧ್ಯ. ಸಾಹಿತ್ಯ ಓದುಗನಿಗೆ ಹತ್ತಿರವಾಗಿರಲಿ ಎಂದರು.
ಸಾಹಿತಿ ಭೋಜರಾಜ ಸೊಪ್ಪಿಮಠ ದಂಪತಿಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಪ್ರಿಯಾಂಕಾ ನಡುವಿನಮನಿ, ಯೋಗಾಚಾರ್ಯ ಸಂಗಮೇಶ ಕೆ.ಮೇಲ್ಮುರಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರಶೆಟ್ಟರ್, ವಿವೇಕಾನಂದಗೌಡ ಇತರರಿದ್ದರು.