

ಕುಕನೂರು: ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಲು ಜನಸ್ಪಂದನದ ಮೂಲಕ ಜಿಲ್ಲಾಡಳಿತ ಗ್ರಾಮಸ್ಥರ ಮನೆ ಬಾಗಿಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಬಾಪೂಜಿ ಡಿ-ಇಡಿ ಕಾಲೇಜು ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಜಿಲ್ಲಾ-ತಾಲೂಕು ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಸಭೆ ನಡೆಸಿ ಸಾರ್ವಜನಿಕರಿಗೆ ಆಸರೆಯಾಗುವ ಪ್ರತಿ ಯೋಜನೆಗಳ ಆರ್ಥಿಕ-ಭೌತಿಕ ಸಾಧನೆಗಳ ಬಗ್ಗೆ ಪರಿಶೀಲಿಸಿ, ಆಯಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಗ್ರಾಮ ಮತ್ತು ಹೋಬಳಿಗೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತೆರಳಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಲಾಗುತ್ತದೆ. ಗ್ರಾಮ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ಜಿಪಂ ಸಿಇಒ ರಾಹುಲ್ ಪಾಂಡೆಯ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಎಡಿಸಿ ಸಾವಿತ್ರಿ ಬಿ.ಕಡಿ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ್ ಪ್ರಾಣೇಶ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ, ಪಿಎಸ್‌ಐ ಗುರುರಾಜ, ಬೇವೂರ ಪಿಎಸ್‌ಐ ಪ್ರಾಶಾಂತ, ಗ್ರಾಪಂ ಪಿಡಿಒ ನೀಲಮ್ಮ ಇತರರಿದ್ದರು.
ಕುಕನೂರು ತಾಲೂಕಿನಲ್ಲಿ 23,781 ಮಂಗಳೂರು ಹೋಬಳಿಯಲ್ಲಿ 8026 ಜನರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಕುಕನೂರು ತಾಲೂಕಿನಲ್ಲಿ 26,626 ಜನರು ಮತ್ತು ಮಂಗಳೂರು ಹೋಬಳಿಯಲ್ಲಿ 3993 ಜನರು ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ 745 ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಸ್ಟೈಫಂಡ್ ಪಡೆಯುತ್ತಿದ್ದಾರೆ. ಜಿಲ್ಲೆಗೆ ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಏಪ್ರಿಲ್ 2024ರವರೆಗೆ ಅರ್ಹ ಫಲಾನುಭವಿಗಳಿಗೆ ಅನುದಾನವನ್ನು ಡಿಬಿಟಿ ತಂತ್ರಾಂಶದ ಮೂಲಕ ವರ್ಗಾಯಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಕುಕನೂರು-ಮಂಗಳೂರು ಮತ್ತು ಮಂಗಳೂರು-ಮುಂಡರಗಿಗೆ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಮುಸ್ಲಿಂ ಸಮುದಾಯಕ್ಕೆ ಖಬರಸ್ಥಾನ ಬೇಕು ಎಂದು ಅಂಜುಮನ್ ಕಮಿಟಿ ಅಧ್ಯಕ್ಷರು ಮನವಿ ಸಲ್ಲಿಸಿದರು. ತಮಗೆ ಭೂಮಿ ಮಂಜೂರಿ ಮಾಡಬೇಕು ಎಂದು ನಬಿಸಾಬ ಹುಸೇಬ್‌ಸಾಬ ಅವರು, ಆಶ್ರಯ ಯೋಜನೆಯಡಿ ಮನೆ ಮಂಜೂರಿ ಮಾಡಬೇಕು ಎಂದು ಲಲಿತಮ್ಮ ಪೂಜಾರ ಅವರು, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಸ್ತೆ ನಿರ್ಮಿಸಿಕೊಡುವ ಬಗ್ಗೆ ಉಮಚಗಿಯ ಗವಿಸಿದ್ದಪ್ಪ ಛಟ್ಟಿ ಅವರು ಮನವಿ ಸಲ್ಲಿಸಿದರು. ಪೂರ್ವ ಮುಂಗಾರು ಬರ ಘೋಷಣೆ ಮಾಡಬೇಕು ಎಂದು ಶರಣಪ್ಪ ಬಸಪ್ಪ ಅವರು, ಕೆಪಿಎಸ್ ಶಾಲೆಯ ಶಾಲಾ ಸುಧಾರಣಾ ಸಮಿತಿ ಸಭೆ ಕರೆಯುತ್ತಿಲ್ಲ ಎಂದು ಶರಣಪ್ಪ ಹ್ಯಾಟಿ ಅವರು, ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡಬೇಕು ಎಂದು ಜನರು ಮನವಿ ಸಲ್ಲಿಸಿದರು. ಹುಲಿಗಿ ಸೇರಿದಂತೆ ವಿವಿಧೆಡೆ ಅವ್ಯಾಹತವಾಗಿ ನಡೆಯುವ ಪ್ರಾಣಿವಧೆ ತಡೆಯಬೇಕು ಎಂದು ಮುಖಂಡ ಎಂ.ಬಿ.ಅಳವಂಡಿ ಮನವಿ ಮಾಡಿದರು.
ಜು.31 ರೊಳಗೆ ಖುದ್ದು ರೈತರು ಅಥವಾ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಮೊಬೈಲ್ ಆ್ಯಪ್ ಮೂಲಕ ಮಾಡಿಕೊಳ್ಳಬೇಕು. ಬೆಳೆ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ, ಬ್ಯಾಂಕ್‌ನ ಬೆಳೆ ಸಾಲ ಪಡೆಯಲು ಈ ಬೆಳೆ ಸಮೀಕ್ಷೆಯ ಡೇಟಾ ಅವಶ್ಯವಾಗಿದೆ.ರುದ್ರೇಶಪ್ಪ ಟಿಎಸ್ ಜಂಟಿ ಕೃಷಿ ನಿರ್ದೇಶಕ