

ಕುಕನೂರು: ಮನೆಗಳಲ್ಲಿ ಪಾಲಕರು ಮಕ್ಕಳಿಗೆ ಮೊಬೈಲ್ ಕೊಡಬಾರದು. ಬದಲಿಗೆ ಚಟುವಟಿಕೆಗಳ ಮೂಲಕ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ತಾಲೂಕಿನ ತಳಕಲ್ ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಆಶ್ರಯದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಅಂಗನವಾಡಿ ಮಕ್ಕಳ ಬಾಲಮೇಳ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಿಂದ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಅನುಕೂಲವಾಗಿದೆ. ಪಠ್ಯ ಕ್ರಮದಂತೆ ಚಟುವಟಿಕೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮವನ್ನು 6 ರಾಜ್ಯಗಳಿಂದ ಅಧಿಕಾರಿಗಳು ವೀಕ್ಷಣೆ ಮಾಡಿದರು. ನಂತರ 2024-25ನೇ ಸಾಲಿನಲ್ಲಿ ರಾಷ್ಟ್ರೀಯ ನೆಕ್ಸಸ್ ಪ್ರಶಸ್ತಿ ಲಭಿಸಿತು. ಪೋಷಕರ ನಡೆ ಅಂಗನವಾಡಿಯ ಕಡೆ ಸಭೆಗಳು ಮತ್ತು ಹಲೋ ಪೋಷಕರೇ ಇಂತಹ ವಿನೂತನ ಕಾರ್ಯಕ್ರಮಗಳನ್ನು ಅಂಗನವಾಡಿ ಮಕ್ಕಳ ಪಾಲಕರಿಗಾಗಿ ಮಾಡಲಾಗುತ್ತಿದೆ. ಬಾಲ ಮೇಳ ಕಾರ್ಯಕ್ರಮ ಮಕ್ಕಳ ಕಲಿಕೆ ಮತ್ತು ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಿ.ವಾಯ್.ಶೇಟ್ಟಪ್ಪನವರ್ ಮಾತನಾಡಿ, ಅಂಗನವಾಡಿಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ. ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕ ಆಹಾರ ನೀಡುವುದು ಅತ್ಯವಶ್ಯಕವಾಗಿದೆ. ಮಕ್ಕಳ ಕಲಿಕೆಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ. ಚಟುವಟಿಕೆ ಮೂಲಕ ಶಿಕ್ಷಣ ನೀಡುವುದರಿಂದ ಮಕ್ಕಳ ಕಲಿಕೆ ಸುಲಭವಾಗುತ್ತದೆ ಎಂದರು. ಗ್ರಾಪಂ ಅಧ್ಯಕ್ಷೆ ಜಹೀರಾ ಬೇಗಂ ಇತರರಿದ್ದರು.
ಬಾಲಮೇಳ ಕಾರ್ಯಕ್ರಮದ ನಿಮಿತ್ತ ಪಾಲಕರಿಗೆ ಆಟಗಳನ್ನು ಆಡಿಸಲಾಯಿತು. ಶಾಲಾ ಪೂರ್ವ ಶಿಕ್ಷಣ ಸ್ಟಾಲ್, ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವೇಷ ಭೂಷಣ ಹಾಗೂ ಕಲಿತ ಚಟುವಟಿಕೆಗಳನ್ನು ಪ್ರಸ್ತುತ ಪಡಿಸಿದರು.