ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲ

Student Protest
ಗುಣಮಟ್ಟದ ಶಿಕ್ಷಣ ನೀಡುವಂತೆ ಆಗ್ರಹಿಸಿ ಕುಕನೂರು ವಿದ್ಯಾನಂದ ಗುರುಕುಲ ಅಂದಾನಪ್ಪ ಹೊಸಮನಿ ಪದವಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
Published on

ಕುಕನೂರು: ಗುಣಮಟ್ಟದ ಶಿಕ್ಷಣ ನೀಡುವಂತೆ ಆಗ್ರಹಿಸಿ ಪಟ್ಟಣದ ವಿದ್ಯಾನಂದ ಗುರುಕುಲ ಅಂದಾನಪ್ಪ ಹೊಸಮನಿ ಪದವಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ಕಾಲೇಜಿನಲ್ಲಿ ಬಿಎ, ಬಿಕಾಂ ಕೋರ್ಸ್‌ಗಳಿದ್ದು, ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕೆಂದು ಪ್ರವೇಶ ಪಡೆದಿದ್ದೇವೆ. ಪ್ರತಿನಿತ್ಯ ಒಂದಿಲ್ಲ ಒಂದು ಸಮಸ್ಯೆಯಿಂದ ಇಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರವೇಶಕ್ಕೆ ಪ್ರತಿ ವಿದ್ಯಾರ್ಥಿಯಿಂದ 8 ರಿಂದ 9 ಸಾವಿರ ರೂ. ಶುಲ್ಕ ಪಡೆಯುತ್ತಾರೆ. ಇದಕ್ಕೆ ತಕ್ಕಂತೆ ಪುಸ್ತಕ, ಗ್ರಂಥಾಲಯ, ಕಂಪ್ಯೂಟರ್ ಇತರ ಸೌಲಭ್ಯ ನೀಡುತ್ತಿಲ್ಲ. 8 ವಿಷಯಗಳಿಗೆ ಮೂವರೇ ಶಿಕ್ಷಕರಿದ್ದಾರೆ. ಬಾಕಿ 5 ವಿಷಯ ನಾವೇ ಓದಿಕೊಳ್ಳಬೇಕಾಗಿದೆ. ಕರ್ತವ್ಯ ನಿರ್ವಹಿಸುವ ಮೂವರು ಶಿಕ್ಷಕರಿಗೆ 6 ತಿಂಗಳಿಂದ ವೇತನ ಬಿಡುಗಡೆಯಾಗದೆ ಜೀವನನಿರ್ವಹಣೆ ಕಷ್ಟವಾಗಿದೆ.

ಎನ್‌ಎಸ್‌ಎಸ್, ಕ್ರೀಡಾಕೂಟಕ್ಕೆ ಅನುದಾನ ಬಂದರೂ ಯಾವ ಚಟುವಟಿಕೆ ಕೈಗೊಂಡಿಲ್ಲ. ಪರೀಕ್ಷೆಯ ಹಾಲ್‌ಟಿಕೆಟ್‌ಗೆ ಪ್ರತಿಯೊಬ್ಬರಿಗೆ 100 ರೂ. ಪಡೆಯುತ್ತಾರೆ. ಒಟ್ಟಾರೆ ಆಡಳಿತ ಮಂಡಳಿ ಪದವಿ ಕಾಲೇಜು ನಡೆಸಲು ವಿಫಲವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ನಮ್ಮ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net