

ಕುಕನೂರು: ತಾಲೂಕಿನ ಕವಳಕೇರಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅವಮಾನಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿದ್ದು, 10 ಜನರ ವಿರುದ್ಧ ಕುಕನೂರು ಠಾಣೆಯಲ್ಲಿ ದೂರು ದಾಖಲಾಗಿದೆ. ದಲಿತ ಸಮುದಾಯದವರು ಮಂಗಳವಾರ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ದಲಿತ ಯುವ ಮುಖಂಡ ದುರಗಪ್ಪ ನಡುವಲಮನಿ ಮಾತನಾಡಿ, ಅಂಬೇಡ್ಕರ್ ಸರ್ವ ಸಮುದಾಯದ ಆಸ್ತಿ. ಶಿಕ್ಷಣ, ಉದ್ಯೋಗ, ಮತದಾನದ ಹಕ್ಕು ನೀಡಿ ಸಮಾಜಿಕ ನ್ಯಾಯ ಒದಗಿಸಿದ್ದಾರೆ. ಅಂತಹ ನಾಯಕನ ಭಾವಚಿತ್ರಕ್ಕೆ ಪುಂಡರು ಅವಮಾನಿಸಿರುವುದು ಹೇಯ ಕೃತ್ಯ. ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಮುಂದೆ ಹೀಗಾಗದಂತೆ ನಿಗಾ ವಹಿಸಬೇಕೆಂದು ಆಗ್ರಹಿಸಿದರು.
ಎಂಪಿ, ಎಂಎಲ್, ಎಸ್ಪಿ ಭೇಟಿ: ಸ್ಥಳಕ್ಕೆ ಶಾಸಕ ಬಸವರಾಜ ರಾಯರಡ್ಡಿ ಭೇಟಿ ನೀಡಿ, ಅಂಬೇಡ್ಕರ್‌ಗೆ ಆದ ಅವಮಾನ ಸಹಿಸುವುದಿಲ್ಲ. ಯಾರೇ ತಪ್ಪು ಮಾಡಿದ್ದರೂ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಗಡಿಪಾರಿಗೆ ಅವಕಾಶವಿದ್ದರೆ ಮಾಡುವಂತೆ ಎಸ್ಪಿಗೆ ಸೂಚಿಸಿರುವುದಾಗಿ ತಿಳಿಸಿದರು. ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಮಾತನಾಡಿ, ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು. ಇಂಥ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಸದ ಕೆ.ರಾಜಶೇಖರ್ ಹಿಟ್ನಾಳ ಮಾತನಾಡಿ, ಸಂವಿಧಾನ ಶಿಲ್ಪಿಗೆ ಅಪಮಾನ ಹೇಯ್ಯ ಕೃತ್ಯ. ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರ ಮನವೊಲಿಸಿದರು. ಎಸಿ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ಎಂ.ಪಿ.ಸರವಗೋಳ, ಸಿಪಿಐ ಮೌನೇಶ್ವರ ಮಾಲಿ ಪಾಟೀಲ್, ತಹಸೀಲ್ದಾರ್ ಎಚ್.ಪ್ರಾಣೇಶ್, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಗ್ರಾಪಂ ಸಕ್ರಪ್ಪ ಚಿನ್ನೂರು, ಪಿಡಿಒ ನೀಲಂ ಚಳಗೇರಿ, ಸಮಾಜ ಕಲ್ಯಾಣಾಧಿಕಾರಿ ಶಶಿಧರ ಸಕ್ರಿ, ದಲಿತ ಮುಖಂಡರಾದ ವಸಂತ ಬಾವಿಮನಿ, ಹನುಮಂತಪ್ಪ ಮುತ್ತಾಳ, ಸಿದ್ದು ಮಣ್ಣಿನವರ, ವಿಜಯ ಜಕ್ಕಲಿ, ಶರಣಪ್ಪ ಹಿರೇಮನಿ, ಸಂಜಿವ್ ಹಿರೇಮನಿ ಇತರರಿದ್ದರು.