

ಕುಕನೂರು: ಕಲುಷಿತ ನೀರು ಪೂರೈಕೆಯಿಂದ ಅನಾರೋಗ್ಯ ಕಾಡುತ್ತಿದೆ ಎಂದು ಆರೋಪಿಸಿ ತಾಲೂಕಿನ ಕುದರಿಮೋತಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ತೆರಳಿ ವಾರ್ಡ್ ಸದಸ್ಯರು ಹಾಗೂ ನೀರು ಸರಬರಾಜು ಸಿಬ್ಬಂದಿ ವಿರುದ್ಧ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಎಸ್ಸಿ ಕಾಲನಿಯಲ್ಲಿ ಹಲವು ದಿನಗಳಿಂದ ಮಣ್ಣು, ಕಸ ಮಿಶ್ರಿತ ನೀರು ಬರುತ್ತಿದ್ದು, ಇದರ ಸೇವನೆಯಿಂದ ಅನೇಕರು ಅನಾರೋಗ್ಯಕ್ಕೀಡಾಗಿದ್ದಾರೆ. ಈ ಬಗ್ಗೆ ಗ್ರಾಮಾಡಳಿತ ಕಾಳಜಿ ವಹಿಸುತ್ತಿಲ್ಲ. ಪಕ್ಕದ ವಾರ್ಡ್‌ಗಳಲ್ಲಿ ಗುಣಮಟ್ಟದ ನೀರು ಪೂರೈಕೆಯಾಗುತ್ತಿದೆ. ನಮ್ಮ ಕಾಲನಿಗೆ ಮಾತ್ರ ಅಶುದ್ಧ ನೀರು ಬರುತ್ತಿದೆ. ಹಲವು ಬಾರಿ ವಾರ್ಡ್ ಸದಸ್ಯರಿಗೆ ತಿಳಿಸಿದರೂ ಪೈಪ್‌ಲೈನ್ ಸೋರಿಕೆ ತಡೆದು ಗುಣಮಟ್ಟದ ನೀರು ಒದಗಿಸಲು ಮುಂದಾಗುತ್ತಿಲ್ಲ. ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷೆ ಫರಿದಾ ಬೇಗಂ ಮಾತನಾಡಿ, ಗ್ರಾಮದಲ್ಲಿ ಒಂದು ವಾರದಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಅಲ್ಲಲ್ಲಿ ನೀರಿನ ಪೈಪ್‌ಗಳು ಒಡೆದಿವೆ. ಇದರಿಂದ ನೀರು ಕಲುಷಿತವಾಗಿ ಪೂರೈಕೆಯಾಗುತ್ತಿದ್ದು, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕೂಡಲೇ ಕಾರ್ಯ ಪ್ರವೃತ್ತರಾಗಲಿದ್ದಾರೆ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದರು.
ವಾರ್ಡ್ ಸದಸ್ಯರಾದ ಮಂಜುನಾಥ್ ಸಜ್ಜನ್, ವಿಜಯಲಕ್ಷ್ಮೀ ದಾಸರ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಭೀಮಪ್ಪ ಕೆಂಗಾರ್, ಪ್ರಮುಖರಾದ ಸಂತೋಷ್ ಕಾಳಿ, ಶರಣಪ್ಪ, ಶಿವಮೂರ್ತಿ ಕಾಳಿ, ಹುಸೇನ್‌ಬಾಷಾ ಅಂಗಡಿ, ವಿಜಯಕುಮಾರ ದಾಸರ್, ಪರಶು ನಡುಲರ ಇತರರಿದ್ದರು.