

ಕುಕನೂರು: ಜಮೀನಿನ ಮಣ್ಣು ಪರೀಕ್ಷಾ ವರದಿ ಆಧರಿಸಿ ಬೆಳೆ ಬೆಳೆಯುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಶಿಕಲಾ ಹೇಳಿದರು.
ತಾಲೂಕಿನ ಭಾನಾಪುರದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಗ್ರಾಮ ಮಟ್ಟದ ಭೂ ಸಂಪನ್ಮೂಲ ಮಾಹಿತಿ ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ತ್ವರಿತ ಬೆಳೆ ಹಾಗೂ ಇಳುವರಿ ಪಡೆಯುವ ಉದ್ದೇಶದಿಂದ ರಸಗೊಬ್ಬರ ಹೆಚ್ಚಾಗಿ ಬಳಕೆ ಮಾಡುತ್ತಿದ್ದರಿಂದ ಭೂಮಿ ಹಾಳಗುತ್ತಿದೆ. ಸಾವಯುವ ಕೃಷಿ ಜತೆಗೆ ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬಹುದು. ಜತೆಗೆ ಮಣ್ಣು ಪರೀಕ್ಷೆ ಮಾಡಿಸಿ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಬೆಳೆ ಬೆಳೆಯುವುದರಿಂದ ಅಧಿಕ ಇಳುವರು ಮತ್ತು ಲಾಭ ಪಡೆಯಬಹುದು ಎಂದರು.
ಭೂ ಸಂಪನ್ಮೂಲ ವ್ಯಕ್ತಿ ಶಾಂತಾ ಕೊರಗಲ್, ಮಣ್ಣು ಪರೀಕ್ಷೆ ಮಾಹಿತಿ ನೀಡಿದರು. ರೈತರ ಸಂಪರ್ಕ ಕೇಂದ್ರದ ಗೂಳಪ್ಪ ಕೊಳಜಿ, ಗ್ರಾಪಂ ಸದಸ್ಯರಾದ ನೀಲಕಂಠಯ್ಯ ಸಸಿಮಠ, ರಾಮಣ್ಣ ಕೊಮಲಾಪುರ, ಪ್ರಮುಖರಾದ ಶಾಂತವೀರಯ್ಯ ಲಕಮಾಪುರಮಠ ಇತರರಿದ್ದರು.