

ಕುಕನೂರು: ವಿವಿಧ ಬೇಡಿಕೆ ಈಡೇರಿಸುವಂತೆ ಅಗ್ರಹಿಸಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕ ಭಾನುವಾರ ಮಸಬಹಂಚಿನಾಳದಲ್ಲಿ ಸಚಿವ ಹಾಲಪ್ಪ ಆಚಾರಗೆ ಮನವಿ ಸಲ್ಲಿಸಿತು.
ಕುಕನೂರು ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭಿಸಬೇಕು. ಬಿಇಒ ಹುದ್ದೆ ಮಂಜೂರು ಮಾಡಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಪ್ರಾರಂಭಿಸಬೇಕು. ಶಿಕ್ಷಕರ ಸಭೆ-ಸಮಾರಂಭ ನಡೆಸಲು ಪಟ್ಟಣದಲ್ಲಿ ಗುರು ಭವನ ನಿರ್ಮಿಸಬೇಕು. ಯಲಬುರ್ಗಾ, ಕುಕನೂರು ತಾಲೂಕು ಪ್ರೌಢಶಾಲಾ ನೌಕರರ ಪತ್ತಿನ ಸಹಕಾರ ಸಂಘಕ್ಕೆ ಉಪ ಶಾಖೆಯನ್ನು ಕುಕನೂರಲ್ಲಿ ಆರಂಭಿಸಲು ನಿವೇಶನ ನೀಡಲು ಪಟ್ಟಣ ಪಂಚಾಯಿತಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ, ತಾಲೂಕು ಅಧ್ಯಕ್ಷ ಬಸವರಾಜ ಮೇಟಿ, ಪ್ರಧಾನ ಕಾರ್ಯದರ್ಶಿ ಸುರೇಶ ಅಬ್ಬಿಗೇರಿ, ಉಪಾಧ್ಯಕ್ಷ ರಂಗಪ್ಪ ಓಲೇಕಾರ, ರಾಜ್ಯ ಪರಿಷತ್ ಸದಸ್ಯ ಶಂಕರಗೌಡ ವಣಗೇರಿ, ಸಹ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್, ಶಿಕ್ಷಕಿ ಎಚ್‌ಟಿ ಶಿಲ್ಪಾಬಾಯಿ ಇತರರಿದ್ದರು.