

ಕುಕನೂರು: ಸಂವಿಧಾನವು ಪ್ರಜೆಗಳಿಗೆ ಮತದಾನದ ಹಕ್ಕು ನೀಡಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಿಡಿಒ ಶೇಕ್ ಸಾಬ್ ಪಿಂಜಾರ್ ಹೇಳಿದರು.
ಶಿರೂರು ಗ್ರಾಮದಲ್ಲಿ ಗುರುವಾರ ಗ್ರಾಪಂ ಆಯೋಜಿಸಿದ್ದ ಕಲ್ಪಿತ ಮತದಾನ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರಲ್ಲಿ ಜಾಗೃತಿ ಮೂಡಿಸುವುದರಿಂದ ಶೇ.100 ಮತದಾನ ಮಾಡಿಸಬಹುದಾಗಿದೆ. ಮತದಾರರು ಚುನಾವಣೆಯಲ್ಲಿ ನಿರ್ಭೀತರಾಗಿ ಹಕ್ಕನ್ನು ಚಲಾಯಿಸಬೇಕು. ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ ಎಂದರು. ಮಾಸ್ಟರ್ ಟ್ರೇನರ್ ನಬೀಸಾಬ್ ಬಿನ್ನಾಳ ಮಾತನಾಡಿದರು. ತಾಲೂಕು ಸಂಯೋಜಕ ಲಕ್ಷ್ಮಣ ಕೆರಳ್ಳಿ, ಗ್ರಾಪಂ ಕರವಸೂಲಿಗಾರ ಹನಮಂತಗೌಡ ಹಾಳಕೇರಿ, ಗ್ರಂಥಪಾಲಕ ವೀರನಗೌಡ ಮಾಲಿ ಪಾಟೀಲ್, ಪ್ರಮುಖರಾದ ವೀರೇಂದ್ರ ಮಾದಿನೂರ, ಭೀಮರಾಜ ಕಡಗತ್ತಿ ಇತರರಿದ್ದರು.