

ಕುಕನೂರು: ಆಧುನಿಕ ತಂತ್ರಜ್ಞಾನಗಳ ಭರಾಟೆಯಲ್ಲಿ ಸಾಂಸ್ಕೃತಿಕ ಕ್ಷೇತ್ರವನ್ನೂ ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಅಂದಪ್ಪ ಹುರಳಿ ಹೇಳಿದರು.
ತಾಲೂಕಿನ ಗೊರ್ಲೆಕೊಪ್ಪ ಗ್ರಾಮದ ಕಟ್ಟಿ ಬಸವೇಶ್ವರ ಸಭಾಭವನ ಆವರಣದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ ಗಾನ ಲಹರಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ನಾಟಕ, ಭಜನೆ, ಕೋಲಾಟ, ಹಂತಿಪದ, ಗೀಗೀಪದ, ಸೋಬಾನೆ ಪದಗಳು ಈಗಲೂ ಜೀವಂತವಾಗಿರುವುದು ಹೆಮ್ಮೆಯ ಸಂಗತಿ. ಆದರೆ, ಈ ಕಲೆಗಳು ಪಟ್ಟಣ ಪ್ರದೇಶದಲ್ಲಿ ಮಾಯವಾಗುತ್ತಿರುವುದು ಖೇದಕರ. ಜಾನಪದ ಕಲೆಗಳ ಉಳಿವಿಗೆ ಇಲಾಖೆ ಹೊಸ ಯೋಜನೆಗಳ ಮೂಲಕ ಪ್ರೋತ್ಸಾಹಿಸುತ್ತಿದೆ. ಇದಕ್ಕೆ ಸಾರ್ವಜನಿಕ ಸಹಭಾಗಿತ್ವ ಇದ್ದರೆ ಹೆಚ್ಚಿನ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಗ್ರಾಮದ ಹಿರಿಯ ಚನ್ನಪ್ಪಗೌಡ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಶರಣಯ್ಯ ಇಟಗಿ, ಕಲಾವಿದ ವೀರಯ್ಯ ಹಿರೇಮಠ, ಪ್ರಮುಖರಾದ ಕನಕರಾಯ ಭಜತ್ರಿ, ಕಟ್ಟಯ್ಯ, ವಿರೂಪಾಕ್ಷಯ್ಯ ಹಿರೇಮಠ, ಬಸಯ್ಯ ಸ್ವಾಮಿ, ಶರಣಯ್ಯ ನಿಂಗಾಪುರ, ನಾಗಯ್ಯ ವಿರುಪಾಪುರ ಇತರರಿದ್ದರು.