ಮನುಷ್ಯತ್ವ ಮೈಗೂಡಿಸಿಕೊಂಡರೆ ಜೀವನ ಸಾರ್ಥಕ

04042023 KUKANOUR NEWS
Published on

ಕುಕನೂರು : ಮನುಷ್ಯ ಮಾನವೀಯತೆ ಮೈಗೂಡಿಸಿಕೊಂಡಲ್ಲಿ ಜೀವನ ಸುಂದರವಾಗಿರುತ್ತದೆ ಎಂದು ಗದಗ-ರಾಜೂರು-ಆಡ್ನೂರು ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯರು ಹೇಳಿದರು.

ರಾಜೂರು ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀಹಜರತ್ ಸೈಯದಶಾ ಫಕೀರಶಾವಲಿ ಚೀಸ್ತಿ ಖಾದ್ರಿ ಶರಣರ ಅಜ್ಜನ ಕಟ್ಟಿ ಉರುಸ್ ನಿಮಿತ್ತ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದ ಸಾನ್ನಿಧ್ಯವಹಿಸಿ ಶನಿವಾರ ಮಾತನಾಡಿದರು.

ಉರುಸ್ ಹಾಗೂ ಜಾತ್ರೆ ಎರಡೂ ಒಂದೇ. ಇವೆರಡೂ ದೇವನನ್ನು ಆರಾಧಿಸುವ ಪ್ರಕ್ರಿಯೆಗಳು. ಹೆಸರು ಮಾತ್ರ ಬೇರೆ. ಮನುಷ್ಯನ ಅಂತರಾತ್ಮದಲ್ಲಿ ಪರಮಾತ್ಮ ಇರುತ್ತಾನೆ. ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ತನ್ನನ್ನು ತಾನು ಅರಿಯಬೇಕು. ಮನುಷ್ಯತ್ವ ಅಳವಡಿಸಿಕೊಂಡರೆ ಅದುವೇ ಸಾರ್ಥಕ ಜೀವನ. ಮನುಷ್ಯ ವಿವಿಧ ರೀತಿ, ನಾನಾ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಿದರೂ ಒಬ್ಬ ದೇವನಿಗೆ ಸಲ್ಲುತ್ತದೆ. ರಾಜೂರು ಗ್ರಾಮ ಶ್ರದ್ಧಾ, ಭಕ್ತಿ, ಸೌಹಾರ್ದದ ತವರು. ಜಾತ್ರೆ, ಉರುಸ್ ಹಿಂದು-ಮುಸ್ಲಿಮರು ಒಂದಾಗಿ ಆಚರಿಸುತ್ತಿದ್ದು, ಮಾದರಿಯಾಗಿದ್ದಾರೆ ಎಂದರು.

ಹಿರಿಯ ಸಾಹಿತಿ ಬಸವರಾಜ ಬಿನ್ನಾಳ, ನಿವೃತ್ತ ಉಪನ್ಯಾಸಕ ಎ.ಪಿ ಮುಧೋಳ, ಫಕೀರಸಾಬ್ ನದಾಫ್ ಮಾತನಾಡಿದರು. ಗ್ರಾಮದ ಪ್ರಮುಖ ರೇವಣಸಿದ್ದಯ್ಯ ಚರಂತಿಮಠ ಉದ್ಘಾಟಿಸಿದರು. ರೋಣ-ರಾಜೂರು ಷರೀಫ್ ದರ್ಗಾದ ಸೈಯದ್ ಶಾ ಸುಲೇಮಾನ ಶಾವಲಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಬಸವರಾಜ ಕೊಡ್ಲಿ, ಬಸವರಾಜ ಬಣ್ಣದಬಾವಿ, ಪೀರ್‌ಸಾಬ್ ದಫೇದಾರ್, ಚಿನ್ನಪ್ಪ ಕಮ್ಮಾರ್, ಮೌಲಾಹುಸೇನ್, ಅಮರೇಶ್ವರಸ್ವಾಮಿ ಕಂದಗಲ್ಲಮಠ, ಶಿಕ್ಷಕ ಮಲ್ಲಿಕಸಾಬ್‌ತಳಕಲ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net