

ಕುಕನೂರು: ದುಡಿವ ಕೈಗಳಿಗೆ ನರೇಗಾ ಯೋಜನೆ ಆಸರೆಯಾಗಿದ್ದು, ಸ್ವಗ್ರಾಮದಲ್ಲೇ ಕೂಲಿ ಮಾಡುವ ಮೂಲಕ ಗುಳೆಯಿಂದ ದೂರ ಸರಿದಿದ್ದಾರೆ.
ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸದ ಖಾತ್ರಿ ಒದಗಿಸಿ, ಕುಟುಂಬದವರು ಗುಳೆ ಹೊಗಬಾರದು ಎಂಬ ಉದ್ದೇಶ ಸಾಕಾರಗೊಂಡಿದೆ.
ತಾಲೂಕಿನ ಎಲ್ಲ ಗ್ರಾಪಂಗಳ ನಡುವೆ 4,10,000 ದಿನಗಳ ವಾರ್ಷಿಕ ಗುರಿ ಇದ್ದು, ಕೆಲಸ ಕೇಳಿ ಬಂದ ಕೂಲಿಕಾರರಿಗೆ ತಕ್ಷಣ ಕೆಲಸ ನೀಡುವುದರೊಂದಿಗೆ ಇದೇ ಪ್ರಥಮ ಬಾರಿಗೆ ಕೇವಲ ಎರಡು ತಿಂಗಳಲ್ಲಿ ವಾರ್ಷಿಕ ಗುರಿ ಶೇ.53 ಸಾಧಿಸಿದ್ದು, 2.20 ಲಕ್ಷ ಮಾನವ ದಿನ ಸೃಜನೆ ಮಾಡಲಾಗಿದೆ.
ಒಟ್ಟು 15 ಗ್ರಾಪಂಗಳಿದ್ದು, ವಾರ್ಷಿಕವಾಗಿ ಪ್ರತಿ ಗ್ರಾಪಂ ಸಕ್ರಿಯ ಕೂಲಿಕಾರರ ಅನುಗುಣವಾಗಿ ತಿಂಗಳುವಾರು ಮತ್ತು ವಾರ್ಷಿಕ ಮಾನವ ದಿನಗಳ ಗುರಿ ನಿಗದಿಮಾಡಲಾಗಿತ್ತು. ಮೇ 2024ರ ಅಂತ್ಯಕ್ಕೆ 15 ಗ್ರಾಪಂಗಳಲ್ಲಿ 14 ಗ್ರಾಪಂಗಳು ಶೇಕಡ ನೂರಕ್ಕಿಂತ ಹೆಚ್ಚಿನ ಸಾಧನೆ ಮಾಡಿವೆ. ಯರೇಹಂಚಿನಾಳ ಗ್ರಾಪಂ ವಾರ್ಷಿಕ ಗುರಿ 14,563 ಇದ್ದು, ಕೇವಲ ಎರಡು ತಿಂಗಳಲ್ಲಿ 19,987 ಮಾನವ ದಿನಗಳನ್ನು ಸೃಜನೆ ಮಾಡಿ ಶೇ.137 ಸಾಧನೆ ಮಾಡಿದೆ.
ದರಿಮೋತಿ ಗ್ರಾಪಂ ಕೂಲಿಕಾರರಿಗೆ ನಿರಂತರ ಕೆಲಸ ನೀಡುವುದರೊಂದಿಗೆ 32,286 ಮಾನವ ದಿನಗಳನ್ನು ಸೃಜನೆ ಮಾಡಿ ವಾರ್ಷಿಕ ಗುರಿಯ ಶೇ.79 ಸಾಧನೆ ಮಾಡಿದೆ. ತಾಲೂಕಿನ ತಳಕಲ್ ಮತ್ತು ಮಂಗಳೂರು ಗ್ರಾಮ ಪಂಚಾಯಿತಿಗಳು ಮಹಿಳಾ ಕೂಲಿಕಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ನೀಡುವುದರೊಂದಿಗೆ ರಾಜ್ಯ ಆಯುಕ್ತಾಲಯದ ನಿರ್ದೇಶನದಂತೆ ಶೇ.65 ಮಹಿಳಾ ಭಾಗವಹಿಸುವಿಕೆ ಕಾರ್ಯ ಸಾಧ್ಯವಾಗಿಸಿವೆ.
ತಾಲೂಕಿನ ಎಲ್ಲ ಗ್ರಾಪಂ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ಪ್ರತಿದಿನ ತಾಳ್ಮೆಯಿಂದ ಕೆಲಸ ನೀಡಿದ್ದಾರೆ. ಇದರಿಂದ ನರೇಗಾ ಯೋಜನೆ ಪ್ರಗತಿಯತ್ತ ಸಾಗುತ್ತಿದ್ದು, ಕೂಲಿಕಾರರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸಂತೋಷ ಬಿರಾದಾರ ಪಾಟೀಲ್ಇಒ, ತಾಪಂ ಕುಕನೂರು