

ಕುಕನೂರು: ಪಟ್ಟಣದ ಮುಖ್ಯರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ತಾಲೂಕು ಬೀದಿ ಬದಿ ವ್ಯಾಪಾರಸ್ಥರ ಸಂಘದವರು ಉಪತಹಸೀಲ್ದಾರ್ ಗವಿಸಿದ್ದಪ್ಪ ಮಣ್ಣೂರುಗೆ ಬುಧವಾರ ಮನವಿ ಸಲ್ಲಿಸಿದರು.
ಲಾಕ್‌ಡೌನ್‌ನಿಂದಾಗಿ ಬೀದಿ ಬದಿ ವ್ಯಾಪಾರಸ್ಥರು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ಇದರಿಂದಾಗಿ ಪಟ್ಟಣದ ಬಸ್ ನಿಲ್ದಾಣದ ಎದುರು ವ್ಯಾಪಾರಕ್ಕೆ ಅವಕಾಶ ನೀಡಬೇಕು. ಅಂಬೇಡ್ಕರ್ ವೃತ್ತದಿಂದ ವೀರಭದ್ರಪ್ಪ ವೃತ್ತದವರೆಗೆ ಚರಂಡಿ ಕಾಮಗಾರಿ ನಡೆದಿದೆ. ಚರಂಡಿ ಮೇಲಿನ ಪಾದಚಾರಿ ಮಾರ್ಗದಲ್ಲೂ ಮುಂಚೆ ಹಲವಾರು ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದರಿಂದ ವ್ಯಾಪಾರಕ್ಕೆ ಅನುಕೂಲವಿಲ್ಲದೆ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಚರಂಡಿ ಕಾಮಗಾರಿ ಬೇಗ ಮುಗಿಸಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು. ಕಾಮಗಾರಿ ಮುಗಿಯುವವರೆಗೂ ವ್ಯಾಪಾಸ್ಥರಿಗೆ ಬೇರೆ ಸ್ಥಳ ಸೂಚಿಸಬೇಕು ಎಂದು ಮನವಿ ಸಲ್ಲಿಸಿದರು. ಬೀದಿ ಬದಿ ವ್ಯಾಪಾರಸ್ಥರ ಸಂಘದ ತಾಲೂಕು ಅಧ್ಯಕ್ಷ ಕಲ್ಲಪ್ಪ ಮರಡಿ, ಬೀದಿ ಬದಿ ವ್ಯಾಪಾರಸ್ಥರಾದ ದೇವಪ್ಪ ಭಜಂತ್ರಿ, ಮಹೇಶ, ಶಿವಪುತ್ರಪ್ಪ ಮಾಳೆಕೊಪ್ಪ, ಶ್ರೀಕಾಂತ ಮೇಟಿ ಮತ್ತು ಇತರರಿದ್ದರು.