ಕಟ್ಟೆಚ್ಚರದಲ್ಲಿ ಭಾರತ ವಿಶ್ವಕ್ಕೆ ಮಾದರಿ

05052020 Kukanoor Karadi Sanganna MP
Published on

ಸಂಸದ ಸಂಗಣ್ಣ ಕರಡಿ ಹೇಳಿಕೆ | ಕರೊನಾ ಸೇನಾನಿಗಳಿಗೆ ವಂದನೆ ಕಾರ್ಯಕ್ರಮ

ಕುಕನೂರು: ಕಟ್ಟೆಚ್ಚರ ಪಾಲನೆಯಲ್ಲಿ ವಿಶ್ವಕ್ಕೆ ಭಾರತ ಮಾದರಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೀಶ್ವರ ಶಾಖಾಮಠದಲ್ಲಿ ಮುಂಡರಗಿ ಅನ್ನದಾನೀಶ್ವರಮಠದ ಶ್ರೀ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರ 79ನೇ ಜನ್ಮದಿನ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕರೊನಾ ಸೇನಾನಿಗಳಿಗೆ ವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶೇ.93 ಜನ ಮೋದಿ ಅವರ ಲಾಕ್‌ಡೌನ್ ಕ್ರಮ ಮೆಚ್ಚಿದ್ದಾರೆ. ಆರ್ಥಿಕ ಕುಸಿತ ಸರಿಪಡಿಸುವಿಕೆಗೆ ಲಾಕ್‌ಡೌನ್ ಸಡಿಲಿಕೆ ಸದ್ಯ ಅವಶ್ಯ. ಜೀವ ಮತ್ತು ಜೀವನದ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು. ಸ್ವಯಂ ಪ್ರೇರಿತರಾಗಿ ನಿಯಮ ಪಾಲಿಸಬೇಕು. ಆಶಾ ಕಾರ್ಯಕರ್ತೆಯರು ಬಿಡುವಿಲ್ಲದೆ ಶ್ರಮಿಸುತ್ತಿದ್ದು, ಅವರು ಕರೊನಾ ಪತ್ತೆಯಲ್ಲಿ ಮುಖ್ಯವಾಹಿನಿಯಲ್ಲಿ ಬರುತ್ತಾರೆ. ಲಾಕ್‌ಡೌನ್ ದಿನಗಳಲ್ಲಿ ಕೆಲ ಬದಲಾವಣೆ ಆಗಿದೆ. ಸೇವಾ ಮನೋಭಾವ ಬೆಳೆದಿದೆ. ಕೆಲವರು ದುಶ್ಚಟದಿಂದ ದೂರವಾಗಿದ್ದಾರೆ. ಹೃದಯಾಘಾತ, ಅಪಘಾತ, ಕೆಲವು ರೋಗದಿಂದ ಜನ ದೂರವಾಗಿದ್ದಾರೆ. ಕರೊನಾ ಸೇನಾನಿಗಳಿಗೆ ಗೌರವಿಸುವುದು ಆತ್ಮಶುದ್ಧಿ ಕೆಲಸವಿದ್ದಂತೆ ಎಂದರು.

ಮುಖಂಡ ನವೀನ ಗುಳಗಣ್ಣವರ್ ಮಾತನಾಡಿ, ವೈದ್ಯರು, ಪೊಲೀಸರು, ಹೋಮ್ ಗಾರ್ಡ್ಸ್, ಮಾಧ್ಯಮದವರು, ಕಂದಾಯ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಕಾರ್ಯ ಹೆಚ್ಚಿದೆ. ಅವರ ಸೇವಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವುದು ಪ್ರತಿಯೊಬ್ಬರ ಹೆಗಲ ಮೇಲಿರುವ ಜವಾಬ್ದಾರಿ ಎಂದರು.

ಶ್ರೀ ಅನ್ನದಾನೀಶ್ವರ ಶಾಖಾಮಠದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ, ಹೋಮ್ ಗಾರ್ಡ್ಸ್ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಕುಕನೂರಿನ ಪಪಂನಲ್ಲಿ ಪೌರ ಕಾರ್ಮಿಕರಿಗೆ, ಠಾಣೆಯಲ್ಲಿ ಪೊಲೀಸರಿಗೆ ಹಾಗೂ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿಗೆ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಸನ್ಮಾನಿಸಿ ಪುಷ್ಪ ನಮನ ಸಲ್ಲಿಸಲಾಯಿತು.

ಶ್ರೀ ಅನ್ನದಾನೀಶ್ವರ ಶಾಖಾಮಠದ ಡಾ. ಮಹಾದೇವ ದೇವರು, ಪ್ರಮುಖರಾದ ಅಂದಪ್ಪ ಜವಳಿ, ಕಳಕನಗೌಡ ಪಾಟೀಲ, ರಾಜು ಆಂದ್ರ, ಈರಪ್ಪ ಕುಡಗುಂಟಿ, ವೀರಯ್ಯ ತೋಂಟದಾರ್ಯಮಠ, ವೀರಣ್ಣ ಅಣ್ಣಿಗೇರಿ, ಪ್ರಕಾಶ ಬೋರಣ್ಣವರ್, ಕುಮಾರ ಗುಳಗಣ್ಣವರ್, ವೀರೇಶ ಸಬರದ, ಎ.ಜಿ ಭಾವಿಮನಿ, ಸುಧಾಕರ ದೇಸಾಯಿ, ಸೋಮಶೇಖರ ಸೋಂಪುರ, ಲಕ್ಷ್ಮಣ ಕಾಳಿ, ಗದಿಗೆಪ್ಪ ಪವಾಡಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net