

ಕುಕುನೂರು: ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸರ್ಕಾರದ ನೆರವು ಒದಗಿಸಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕೋಮಲಾಪುರ ಗ್ರಾಮದಲ್ಲಿ ನಡೆದ ಬೆಂಕಿ ಅವಘಡದಿಂದ ಮೃತಪಟ್ಟ ಇಬ್ಬರು ಬಾಲಕರ ಮನೆಗೆ ಶುಕ್ರವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದರು. ಘಟನೆ ಬಗ್ಗೆ ತಿಳಿದಾಗ ಇನ್ನೊಂದು ಮಗುವನ್ನು ಉಳಿಸಿಕೊಳ್ಳಲು ಹೆಚ್ಚಿನ ಚಿಕಿತ್ಸೆಗೆ ಕಳಿಸುವಂತೆ ತಿಳಿಸಿದ್ದೆ. ಆದರೆ, ಚಿಕಿತ್ಸೆ ಫಲಿಸಿದೇ ಆ ಮಗುವೂ ಬದುಕಲಿಲ್ಲ. ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಅಗತ್ಯ ನೆರವು ಕೊಡಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು. ಮೃತ ಮಕ್ಕಳ ತಾಯಿ, ತಂದೆಯ ರೋದನ ಮುಗಿಲು ಮುಟ್ಟಿತ್ತು. ಹಿರಿಯ ಮಗ ಇನ್ನೂ ನಾಲ್ಕು ವರ್ಷಕ್ಕೆ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದ. ಮನೆಯ ಆಧಾರವಾಗಬೇಕಿದ್ದವನೇ ಬಿಟ್ಟು ಹೋಗಿದ್ದಾನೆ ಎಂದು ಕಣ್ಣಿರು ಹಾಕಿದರು. ಮುಖಂಡರಾದ ಶಿವಣ್ಣ ಮುತ್ತಾಳ, ಸಿ.ಎಚ್.ಪೊಲೀಸ್ ಪಾಟೀಲ್, ಕಳಕಪ್ಪ ಕಂಬಳಿ, ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ತಾಪಂ ಇಒ ರಾಮಣ್ಣ ದೊಡ್ಮನಿ ಇತರರಿದ್ದರು.
ಆಧಾರವಿಲ್ಲದ ಆರೋಪ: ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಉದ್ದೇಶಕ್ಕಾಗಿ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಅವರ ಕಾಲ(ಕಾಂಗ್ರೆಸ್)ದಲ್ಲಿ ಹಾಕಿದ ಬೀಜವಿದು. ಆದರೆ, ನಮ್ಮ ಅವಧಿಯಲ್ಲಿ ಇಂತಹ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು.