ಬೀದಿ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಸಬಲರಾಗಲಿ : ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಶಯ

30012022 Kukanoor sanmana
Published on

ಕುಕನೂರು: ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳುವ ವ್ಯಾಪಾರಸ್ಥರು ಆರ್ಥಿಕವಾಗಿ ಸಬಲರಾಗಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘ ಭಾನುವಾರ ಹಮ್ಮಿಕೊಂಡಿದ್ದ ನೂತನ ಪಪಂ ಸದಸ್ಯರಿಗೆ ಸನ್ಮಾನ ಹಾಗೂ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಫರೀದಾ ಬೇಗಂಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೀದಿ ಬದಿ ಕುಳಿತು ವ್ಯಾಪಾರ ಮಾಡುವುದು ಭಾರತದಲ್ಲಿ ಮಾತ್ರ ಅಲ್ಲ. ಇತರ ದೇಶಗಳಲ್ಲೂ ಇದೆ. ಉಳ್ಳವರು ದೊಡ್ಡ ಕಟ್ಟಡಗಳನ್ನು ಬಾಡಿಗೆ ಪಡೆದು ವ್ಯಾಪಾರ ನಡೆಸುತ್ತಾರೆ. ಆದರೆ, ಆರ್ಥಿಕವಾಗಿ ಹಿಂದುಳಿದಿರುವ ವ್ಯಾಪಾರಿಗಳು ರಸ್ತೆ ಬದಿ ವ್ಯಾಪಾರ ನಡೆಸುತ್ತಾರೆ. ಇಂಥ ವ್ಯಾಪಾರಸ್ಥರಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ರಾಜ್ಯಾಧ್ಯಕ್ಷ ಸಿ.ರಂಗಸ್ವಾಮಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ಸಿಗುತ್ತಿಲ್ಲ. ಅದಕ್ಕಾಗಿ ಹೋರಾಟ ಅನಿವಾರ್ಯ. ಲಾಕ್‌ಡೌನ್ ಸಂದರ್ಭದಲ್ಲಿ ನಾವು ಅನುಭವಿಸಿದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಭಜಂತ್ರಿ, ತಾಲೂಕು ಅಧ್ಯಕ್ಷ ಕಲ್ಲಪ್ಪ ಮರಡಿ, ಪ್ರಧಾನ ಕಾರ್ಯದರ್ಶಿ ಅಶೋಕ ಶಿವಸಿಂಪರ, ಮುಖಂಡರಾದ ರಾಮಣ್ಣ ಭಜಂತ್ರಿ, ಶಿವಕುಮಾರ ನಾಗಲಾಪುರ ಮಠ, ಸಿರಾಜುದ್ದೀನ್ ಕರಮುಡಿ, ನೂರುದ್ದೀನ್ ಗುಡಿಹಿಂದಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net