ವರದಿಗಾರರಿಗೆ ಆತ್ಮಸ್ಥೈರ್ಯ ಇರಲಿ

Lecture Program
ಕುಕನೂರು ತಾಲೂಕಿನ ತಳಕಲ್ ಗ್ರಾಮದ ಕೊಪ್ಪಳ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಿ.ಮಂಜುನಾಥ ಮಾತನಾಡಿದರು. ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ, ಉಪನ್ಯಾಸಕರಾದ ಎಚ್.ಕೆ.ಸಂತೋಷಕುಮಾರ್, ರಂಗನಾಥ್, ಶ್ರೀಕಾಂತ, ಪ್ರವೀಣ ಪೊಲೀಸ್ ಪಾಟೀಲ ಇದ್ದರು.
Published on

ಕುಕನೂರು: ಪತ್ರಿಕಾ ವೃತ್ತಿ ಹೂವಿನ ಹಾಸಿಗೆ ಅಲ್ಲ. ವೃತ್ತಿಯಲ್ಲಿ ಸಾಕಷ್ಟು ಸವಾಲುಗಳು ಮತ್ತು ಸಮಸ್ಯೆಗಳು ಎದುರಾಗುತ್ತವೆ ಎಂದು ಹಿರಿಯ ಪತ್ರಕರ್ತ, ಉಪನ್ಯಾಸಕ ಸಿ.ಮಂಜುನಾಥ ಹೇಳಿದರು.

ತಾಲೂಕಿನ ತಳಕಲ್ ಗ್ರಾಮದ ಕೊಪ್ಪಳ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಪ್ರತಿಯೊಬ್ಬ ಪತ್ರಕರ್ತನಿಗೆ ಆತ್ಮಸ್ಥೈರ್ಯ, ಬರವಣಿಗೆ, ಸಾಮಾಜಿಕ ಜವಾಬ್ದಾರಿ ಅವಶ್ಯ ಎಂದರು.

ವರದಿಗಾರ ಸುದ್ದಿ ಮಾಡುವಾಗ ಮಾನಸಿಕ, ದೈಹಿಕವಾಗಿ ತಯಾರಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಿಗೆ ಸೋಷಿಯಲ್ ಮೀಡಿಯಾಗಳು ಸವಾಲಾಗಿ ಪರಿಣಿಮಿಸಿವೆ. ವರದಿಗಳು ಜನಪರ, ಪ್ರಾಮಾಣಿಕ, ನಿಷ್ಠುರದಿಂದ ಕೂಡಿರಬೇಕು. ಪತ್ರಕರ್ತರು ಪತ್ರಿಕೋದ್ಯಮಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಬೇಕು. ಉತ್ತಮ ಕೌಶಲ, ಮಾತುಗಾರಿಕೆ, ಉತ್ತಮ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಯುವ ಪತ್ರಕರ್ತರು ಓದುವ ಹವ್ಯಾಸ, ಉತ್ತಮ ಬರವಣಿಗೆ ರೂಢಿಸಿಕೊಳ್ಳಬೇಕು ಎಂದರು.

ಕುಲಸಚಿವ ಪ್ರೋ.ಕೆ.ವಿ.ಪ್ರಸಾದ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿದ ನಂತರ ಸರಿಯಾಗಿ ಗ್ರಹಿಸಿಕೊಳ್ಳುವ ಶಕ್ತಿ ಹೊಂದುವ ಮೂಲಕ ಅದನ್ನು ವೇದಿಕೆಯ ಮೇಲೆ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಕೌಶಲ ಬೆಳೆಸಿಕೊಳ್ಳಬೇಕು ಎಂದರು.

ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಮಾತನಾಡಿದರು. ಉಪನ್ಯಾಸಕರಾದ ಎಚ್.ಕೆ.ಸಂತೋಷಕುಮಾರ್, ರಂಗನಾಥ್, ಶ್ರೀಕಾಂತ, ಪ್ರವೀಣ ಪೊಲೀಸ್ ಪಾಟೀಲ, ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ಪದ್ಮಜಾ ನಾಗಲಾಪುರಮಠ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net