

ಕುಕನೂರು: ಬೆಳೆ ವಿಮೆ ಮಂಜೂರಾತಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಿ ಶೀಘ್ರ ವಿಮೆ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್‌ಗೆ ಗುರುವಾರ ಕೊಪ್ಪಳದಲ್ಲಿ ಮನವಿ ಸಲ್ಲಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ 2019-20 ಹಾಗೂ 2020-21ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನ ವಿಮೆ ಮಂಜೂರಾತಿಯಲ್ಲಿ ತಾರತಮ್ಯ ಆಗಿದೆ. ಬೆಳೆ ನಷ್ಟವಾಗಿದ್ದರೂ ವಿಮೆ ಮಂಜೂರಾಗಿಲ್ಲ. ಬೆಳೆ ನಷ್ಟವಾಗಿರುವ ಜಮೀನಿನಲ್ಲಿ ಉತ್ತಮ ಇಳುವರಿ ಎಂದು ನಮೂದಿಸಲಾಗಿದೆ. ಕೆಲ ಬೆಳೆಗಳ ಮಂಜೂರಾಗಿರುವ ಮೊತ್ತವೂ ಇದುವರೆಗೆ ರೈತ ಖಾತೆಗೆ ಜಮಾ ಆಗಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಅಂದಪ್ಪ ಕೋಳೂರು, ಕಾರ್ಯದರ್ಶಿ ವಜೀರ್ ಸಾಬ್ ತಳಕಲ್ಲ, ಕಾರ್ಯಾಧ್ಯಕ್ಷ ಯಂಕರೆಡ್ಡಿ ಚುಕ್ಕನಕಲ್ಲ, ತಾಲೂಕು ಅಧ್ಯಕ್ಷ ಅಂದಪ್ಪ ಹುರಳಿ, ಪ್ರಮುಖರಾದ ಸೈಯದ್ ಸಾಬ್ ಮುಲ್ಲಾ, ಮಾರುತಿ ಕೊಂದಿ, ಪ್ರಶಾಂತಗೌಡ ಪಾಟೀಲ್, ಮರ್ದನ್ ಅಲಿ ಗೊಂಡಬಾಳ, ಶರಣಪ್ಪ, ಸಣ್ಣ ಅಯ್ಯನಗೌಡ, ಶಂಕ್ರಪ್ಪ ವಕ್ಕಳದ ಮತ್ತು ಇತರರಿದ್ದರು.