

ಕುಕನೂರು: ತಾಲೂಕಿನ ಬಳಗೇರಿ ಗ್ರಾಮದ ವ್ಯಕ್ತಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತ ವಾಸವಿರುವ ವಾರ್ಡ್ ಅನ್ನು ಸೀಲ್ ಡೌನ್ ಮಾಡಲಾಗಿದೆ.
ಸೀಲ್ ಡೌನ್ ವಲಯದಲ್ಲಿ 23 ಮನೆಗಳಿದ್ದು, ಕುಟುಂಬ ಸದಸ್ಯರು ಯಾರೊಬ್ಬರೂ ಮನೆಯಿಂದ ಹೊರಬರದ ಹಾಗೆ ಕಟ್ಟೆಚ್ಚರ ವಹಿಸಲಾಗಿದೆ. ಅವಶ್ಯವಿರುವ ಆಹಾರ ಸಾಮಗ್ರಿ, ನೀರು, ಇತರೆ ವ್ಯವಸ್ಥೆಯನ್ನು ಸ್ಥಳೀಯ ಗ್ರಾಪಂನಿಂದ ಮಾಡಲಾಗುತ್ತಿದೆ. ಯಾರೂ ಮನೆಯಿಂದ ಹೊರಬರದಂತೆ ಪಿಎಸ್‌ಐ ಎನ್.ವೆಂಕಟೇಶ ಸೂಚಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದರೂ ಅಧಿಕಾರಿಗಳಿಗೆ ಕೊಲ್ಲೂರಿಂದ ಬಂದಿರುವುದಾಗಿ ಹೇಳುತ್ತ ಗೊಂದಲ ಮೂಡಿಸುತ್ತಿದ್ದಾನೆ. ಸೋಂಕಿತ ವ್ಯಕ್ತಿ ಗ್ರಾಮದಲ್ಲಿ ಹಲವಾರು ಜನರೊಡನೆ ಸಂಪರ್ಕದಲ್ಲಿದ್ದ. ಇಸ್ಪೀಟ್ ಅಡ್ಡೆ, ಮದ್ಯದ ಅಂಗಡಿ, ಚಹಾದಂಗಡಿಗೆ ತೆರಳಿದ್ದ. ಎರಡು ಮೂರು ದಿನದ ಹಿಂದೆ ತನ್ನ ಪತ್ನಿ ಜತೆ ಜಗಳವಾಡುವಾಗ, ಹಲವಾರು ಗ್ರಾಮಸ್ಥರು ಸ್ವತಃ ತಾವೇ ಹೋಗಿ ಆತನ ಜಗಳ ಬಿಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಕರೊನಾ ಭೀತಿಯಿಂದ ಮತ್ತಷ್ಟು ತಬ್ಬಿಬ್ಬಾಗಿದೆ. ಸದ್ಯ ವೈದ್ಯರು ಆ ವ್ಯಕ್ತಿಯ ಸಂಪರ್ಕದಲ್ಲಿದ್ದ 23 ಜನರನ್ನು ಪ್ರಾಥಮಿಕ ಸಂಪಕಿತರೆಂದು ಪರಿಗಣಿಸಿ, ಕ್ವಾರಂಟೈನ್‌ನಲ್ಲಿ ಇರಿಸಿದ್ದಾರೆ.
ಸೋಂಕಿತನ ಸಂಪರ್ಕಕ್ಕೆ ಬಂದವರು ಕೂಡಲೇ ಆಸ್ಪತ್ರೆ ಸಂಪರ್ಕಿಸಿ ತಪಾಸಣೆಗೆ ಮುಂದಾಗಬೇಕು. ಆರೋಗ್ಯದ ಬಗ್ಗೆ ಬಳಗೇರಿ ಗ್ರಾಮಸ್ಥರು ಕಾಳಜಿ ವಹಿಸಬೇಕಿದೆ. ಕೆಮ್ಮು, ಉಸಿರಾಟ ತೊಂದರೆ ಲಕ್ಷಣ ಕಂಡು ಬಂದರೆ ತಪಾಸಣೆಗೆ ಒಳಗಾಗಬೇಕು. | ಸೀಮಾ ಮಾಬಳೆ, ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ, ಕುಕನೂರು