ಕುದೂರು ಗ್ರಾಪಂ ಅಧ್ಯಕ್ಷೆ ವಿರುದ್ಧ ಅಕ್ರಮದ ಆರೋಪ

kkk
Published on

ಕುದೂರು: ಕುದೂರು ಗ್ರಾಪಂ ಅಧ್ಯಕ್ಷೆ ಹಾಗೂ ಅವರ ಪತಿ ಅಧಿಕಾರ ದುರುಪಯೋಗ ಪಡಿಸಿಕೊಂಡು 40 ಲಕ್ಷ ರೂ. ಕಮಿಷನ್ ಪಡೆದು ಕೃಷಿ ಭೂಮಿಗೆ ಅಕ್ರಮವಾಗಿ ಇ-ಸ್ವತ್ತು ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕುದೂರು ಗ್ರಾಪಂ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಗಿರೀಶ್, ಗ್ರಾಪಂ ಅಧ್ಯಕ್ಷೆ ಕುಸುಮಾ ಹೊನ್ನರಾಜು ಅವರು ಅಧಿಕಾರಿಗಳು ಮತ್ತು ಗ್ರಾಪಂ ಸಿಬ್ಬಂದಿ ಬಳಸಿಕೊಂಡು ಕುದೂರು ಬೈಪಾಸ್‌ನಲ್ಲಿರುವ ಕೃಷಿಭೂಮಿಗಳಿಗೆ ಅಕ್ರಮವಾಗಿ ಇ-ಸ್ವತ್ತು ನೀಡಿದ್ದಾರೆ. ಅವರು ಕಮಿಷನ್ ಪಡೆದಿಲ್ಲ ಎನ್ನುವುದಾದರೆ ಲೋಕಾಯುಕ್ತ ತನಿಖೆ ಮಾಡಿಸಲಿ. ಉನ್ನತ ಅಧಿಕಾರಿಗಳಿಂದ ಇ-ಸ್ವತ್ತು ಕುರಿತು ತನಿಖೆಗೆ ಶಿಫಾರಸು ಮಾಡಲಿ ಎಂದರು.

ಸ.ನಂ ನಂ.86/3ರ ಮಾಲೀಕರು ಕಂದಾಯ ಇಲಾಖೆಗೆ ಹಾಗೂ ಬೆಸ್ಕಾಂಗೆ ಫಾರ್ಮ್ ಹೌಸ್ ಕಟ್ಟುತ್ತಿದ್ದೇವೆ ಎಂದು ಬಿಂಬಿಸಿ, ಯಾವುದೇ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ವಾಣಿಜ್ಯ ಕಟ್ಟಡ ಕಟ್ಟುತ್ತಿದ್ದಾರೆ. ಈ ಅಕ್ರಮದಲ್ಲೂ ಗ್ರಾಪಂ ಅಧ್ಯಕ್ಷರ ಪಾಲು ಇದೆ. ಅವರಿಗೂ ಈ ಅಕ್ರಮಗಳಿಗೂ ಸಂಬಂಧವಿಲ್ಲ ಎಂದರೆ ಆ ಜಾಗಕ್ಕೆ ಸಂಬಂಧಿಸಿದಂತೆ ಗ್ರಾಪಂನಿಂದ ಯಾವುದೇ ನಿರಾಕ್ಷೇಪಣಾ ಪತ್ರ ನೀಡಬಾರದು. ಆಸ್ತಿ ಸಂಖ್ಯೆ 582 ಕುರಿತಂತೆ ತನಿಖೆಗೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷೆ ಕುಸುಮಾ ಮಾತನಾಡಿ, ಗಿರೀಶ್ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಕುರಿತಂತೆ ತನಿಖೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ ಎಂದರು.
ಕುದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಯಾವ ಕೃಷಿಭೂಮಿಗೆ ಇ-ಸ್ವತ್ತು ನೀಡಲಾಗಿದೆ ಎಂಬುದರ ತನಿಖೆಯಾಗಲಿ. ಈ ಬಗ್ಗೆ ಉನ್ನತ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ಪಿಡಿಒ ಪುರುಷೋತ್ತಮ್ ಅವರನ್ನು ಸದಸ್ಯ ಕೆ.ಟಿ.ವೆಂಕಟೇಶ್ ಒತ್ತಾಯಿಸಿದರು.

ಮಳಿಗೆ ಹರಾಜು ಫಿಕ್ಸ್: ಸಭೆಯಲ್ಲಿ ಕುದೂರು ಗ್ರಾಪಂ ಮಳಿಗೆಗಳ ಹರಾಜು ಚರ್ಚೆ ಪ್ರಾರಂಭಿಸುತ್ತಿದ್ದಂತೆ ಕೆಲವು ಸದಸ್ಯರು ಬೇಡವೆಂದು ಒತ್ತಾಯಿಸಿದರು. ಅಂತಿಮವಾಗಿ 14 ಗ್ರಾಪಂ ಸದಸ್ಯರು ಮಳಿಗೆಗಳನ್ನು ನಿಯಮಾನುಸಾರವಾಗಿ ಹರಾಜು ಮಾಡಿ ಎಂದು ತಿಳಿಸಿದರು. ಪಿಡಿಒ ಪುರುಷೋತ್ತಮ್ ಮಾತನಾಡಿ, ಹರಾಜು ವಿಚಾರವಾಗಿ ಕೋರಂ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ 64 ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net