

ಕುಶಾಲನಗರ: ಅಭಿವೃದ್ಧಿ ವಿಷಯದಲ್ಲಿ ಎಲ್ಲ ಸದಸ್ಯರಿಗೂ ಕಾಳಜಿ ಇರುತ್ತದೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ಭಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ, ಇತ್ತೀಚೆಗೆ ಪಂಚಾಯಿತಿ ಕಟ್ಟಡಕ್ಕೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರಿಗೆ ಮನವಿ ನೀಡಲು ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ತೆರಳಿದ್ದರು. ಆದರೆ ಈ ವಿಷಯವನ್ನು ಎಲ್ಲ ಸದಸ್ಯರಿಗೂ ತಿಳಿಸದೆ ಪ್ರಚಾರಕ್ಕಾಗಿ ಮನವಿ ಪತ್ರ ನೀಡಿದ್ದಾರೆ ಎಂದು ಕೆ.ಬಿ.ಶಂಶುದ್ಧೀನ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪಾರ್ವತಮ್ಮ, ಚಂದ್ರು ಇನ್ನಿತರರು ಧ್ವನಿಗೂಡಿಸಿದರು.
ಜಲಜೀವನ್ ಮಿಷನ್ ಯೋಜನೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಹಾಗೂ ಚಿಕ್ಕತ್ತೂರಿನಲ್ಲಿ ಆದಷ್ಟು ಬೇಗ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಕೆ.ಬಿ.ಶಂಶುದ್ಧೀನ್ ಒತ್ತಾಯಿಸಿದರು.
ಗೌರಮ್ಮ ಮಾತನಾಡಿ, ಆನೆಕೆರೆ ಬಳಿ ಕೋಳಿ ತ್ಯಾಜ್ಯ ಎಸೆಯುತ್ತಿದ್ದು, ಸ್ಥಳೀಯರು ವಾಸಿಸಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಸ್ಥಳದಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ಕಸ ಎಸೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಸಂತೋಷ್ ಉತ್ತರಿಸಿದರು. ಸುಂದರನಗರದಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿರುವ ಬಗ್ಗೆ ಆಶಾ ವೆಂಕಟೇಶ್ ಪ್ರಸ್ತಾಪಿಸಿದರು. ದೀಪಾ ಧ್ವನಿಗೂಡಿಸಿದರು.
ಶೇ.25ರ ನಿಧಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಜನರಿಗೆ ಕೂಡಲೇ ಸಹಾಯಧನ ವಿತರಿಸಬೇಕು ಎಂದು ಕೆ.ಬಿ.ಶಂಶುದ್ಧೀನ್ ಒತ್ತಾಯಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಚರಂಡಿ ಚರಂಡಿ ಸ್ವಚ್ಛತೆ ಹಾಗೂ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಕಳೆದ ತಿಂಗಳ ಜಮಾ ಖರ್ಚಿನ ಬಗ್ಗೆ ಚರ್ಚೆ ನಡೆಯಿತು. ಕೆಡಿಪಿ ಸಭೆ ಹಾಗೂ ವಾರ್ಡ್ ಸಭೆಯ ದಿನಾಂಕ ನಿಗದಿಪಡಿಸಲಾಯಿತು. 15ನೇ ಹಣಕಾಸು ಹಾಗೂ ವರ್ಗ 1 ರ ಕ್ರಿಯಾಯೋಜನೆಯನ್ನು ಅಂತಿಮಗೊಳಿಸಲಾಯಿತು. ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳಿಗೆ ಆಟಿಕೆಗಳನ್ನು ವಿತರಿಸಲಾಯಿತು. ಸಾರ್ವಜನಿಕರ ಅರ್ಜಿ ವಿಲೇವಾರಿ ನಡೆಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.
ಸಭೆಗೆ ತಡವಾಗಿ ಆರಂಭ
ಸಾಮಾನ್ಯ ಸಭೆ ಸಮಯಕ್ಕೆ ಸರಿಯಾಗಿ ನಡೆಯದ ಬಗ್ಗೆ ಆಶಾ ವೆಂಕಟೇಶ್, ಹರೀಶ್, ಕೆ.ಬಿ.ಶಂಶುದ್ಧೀನ್ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 10.30ಕ್ಕೆ ಸಭೆ ನಿಗದಿಪಡಿಸಲಾಗಿತ್ತು. ಆದರೆ 11.30 ಕಳೆದರೂ ಸಭೆ ಪ್ರಾರಂಭವಾಗದ ಬಗ್ಗೆ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. 11 ಗಂಟೆಯಾದರೂ ಅಧ್ಯಕ್ಷರು ಪಂಚಾಯಿತಿಗೆ ಆಗಮಿಸಿಲ್ಲ. ಅಧ್ಯಕ್ಷರೇ ಹೀಗಾದರೆ ಸದಸ್ಯರು ಸರಿಯಾದ ಸಮಯಕ್ಕೆ ಬರುತ್ತಾರೆಯೇ ಎಂದು ಕೆ.ಬಿ.ಶಂಶುದ್ಧೀನ್ ಪ್ರಶ್ನಿಸಿದರು.