

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಗೆ(ಕೆಡಿಪಿ) ಅಧಿಕಾರಿಗಳು ಗುರುವಾರ ಗೈರಾಗಿದ್ದರಿಂದ ಸಭೆಯನ್ನು ಮುಂದೂಡಲಾಯಿತು.
ಕೆಡಿಪಿ ಸಭೆಗೆ 9 ದಿನಗಳ ಹಿಂದೆಯೇ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಸಭಾ ನೋಟಿಸ್ ನೀಡಲಾಗಿದೆ. ಆದರೆ ಅಧಿಕಾರಿಗಳು ಸಭೆಗೆ ಆಗಮಿಸದೇ ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹಿಸಿ ಸಿಇಒಗೆ ಪತ್ರ ಬರೆಯುವಂತೆ ಗ್ರಾಪಂ ಸದಸ್ಯರು ಒತ್ತಾಯಿಸಿದರು.
ಬೆಳಗ್ಗೆ 11 ಗಂಟೆಗೆ ಸಭೆ ಪ್ರಾರಂಭಿಸಬೇಕಿತ್ತು. ಆದರೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಆಗಮಿಸಿದ್ದರು. ಅಧಿಕಾರಿಗಳು ಇಲ್ಲದೆ ಸಭೆ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಸದಸ್ಯರು, ಅಧಿಕಾರಿಗಳ ಅಸಡ್ಡೆಯನ್ನು ತೀವ್ರವಾಗಿ ಖಂಡಿಸಿದರು.
ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷ ಭಾಸ್ಕರ್ ನಾಯಕ್, ಉಪಾಧ್ಯಕ್ಷೆ ಶಶಿಕಲಾ, ಗ್ರಾ.ಪಂ.ಸದಸ್ಯರು, ಪಿಡಿಒ ಸಂತೋಷ್, ಬಿಲ್ ಕಲೆಕ್ಟರ್ ಅವಿನಾಶ್ ಇತರರು ಇದ್ದರು.