

ಕುಶಾಲನಗರ:
ಸಿಕಲ್ ಸೆಲ್ (ಕುಡುಗೋಲು) ಅನುವಂಶೀಯ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚುವ ಹಾಗೂ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಜೀವ ಉಳಿಸಬಹುದು ಹಾಗೂ ರೋಗಿಗಳ ಆರೋಗ್ಯ ಸ್ಥಿತಿ ಸುಧಾರಿಸಬಹುದು ಎಂದು ಕುಶಾಲನಗರ ತಾಲೂಕು ಆರೋಗ್ಯಾಧಿಕಾರಿ ಡಾ. ಇಂದೂಧರ್ ಹೇಳಿದರು.
ಕುಶಾಲನಗರ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಪಿಎಂ ಜನ್ ಮನ್ ಕಾರ್ಯಕ್ರಮ: 2025 ರಡಿ ತಾಲೂಕಿನ ನಂಜರಾಯಪಟ್ಟಣದ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ "ವಿಶ್ವ ಸಿಕಲ್ ಸೆಲ್( ಕುಡುಗೋಲು) ದಿನಾಚರಣೆ" ಅಂಗವಾಗಿ ಸಿಕಲ್ ಸೆಲ್ ಕಾಯಿಲೆ ಕುರಿತು ಶನಿವಾರ ಏರ್ಪಡಿಸಿದ್ದ ಆರೋಗ್ಯ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆದಿವಾಸಿ ಸಮುದಾಯದವರಲ್ಲಿ ಹೆಚ್ಚಾಗಿ ಕಂಡು ಬರುವ ಸಿಕಲ್ ಸೆಲ್ (ಕುಡುಗೋಲು) ಕಾಯಿಲೆಯನ್ನು 2047ರೊಳಗೆ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ . ಈ ಕಾಯಿಲೆಯ ನಿರ್ಮೂಲನೆಗೆ ಹೆಚ್ಚಿನ ಜಾಗೃತಿ ಅಗತ್ಯ ಎಂದರು.
ಆಶ್ರಮ ಶಾಲೆಯ ಮಕ್ಕಳಿಗೆ ಹಾಗೂ ನೆರೆದಿದ್ದ ಬುಡಕಟ್ಟು ಜನಾಂಗದವರಿಗೂ ಸಿಕಲ್ ಸೆಲ್ ಕಾಯಿಲೆಯಿಂದ ಕಂಡುಬರುವ ರಕ್ತಹಿನತೆಯ ಬಗ್ಗೆ ಹಾಗೂ ಅದಕ್ಕೆ ದೊರಕುವ ಸೌಲಭ್ಯಗಳ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡುವ ಮೂಲಕ ಇದೇ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭ ಸಿಕಲ್ ಸೆಲ್ ಸ್ಕೀನಿಂಗ್ ಮಾಡಲಾಯಿತು. ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ, ಜನಾರ್ದನ್ ರಾವ್, ಕದಂ , ಪ್ರೇಮ್ ಹಾಗೂ ನಂಜರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳಾದ ಪ್ರಿಯಾ, ಪ್ರೇಮಾ, ಹರ್ಷಿತಾ, ರಾಕೇಶ್, ಐಟಿಡಿಪಿ ಯೋಜನೆಯ
ಚಂದನ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.