

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕುಡುಬಿ ಸಮುದಾಯದವರು ಶ್ರಮಜೀವಿಗಳು. ಬದಲಾಗುತ್ತಿರುವ ಕಾಲದಲ್ಲಿ ಬದಲಾವಣೆಗೆ ಸರಿಯಾಗಿ ಕುಡುಬಿ ಸಮುದಾಯ ಬದಲಾಗಬೇಕು. ಶೈಕ್ಷಣಿಕವಾಗಿ ಸಮುದಾಯ ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಕುಡುಬಿ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಪ್ರವೇಶಾತಿ ನೀಡಲು ತಯಾರಿದ್ದೇನೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಿಜಾರು ಅಣ್ಣಪ್ಪ ಸಭಾಂಗಣದಲ್ಲಿ ಆಯೋಜಿಸಲಾದ ಕುಡುಬಿ ಜಾನಪದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಶೇಖರ್ ಗೌಡ ಬರೆದ ‘ತ್ಹೊಹೀ ತ್ಹೊಹೀ ಗುಮ್ಮಟ್’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾೃನಿ ಆಲ್ವಾರಿಸ್ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಕೆ.ಶ್ರೀಪತಿ ಭಟ್, ಸಮಾವೇಶದ ಪ್ರಮುಖರಾದ ಮೋನಪ್ಪ ಗುರಿಕಾರ, ನಿರ್ವಹಣಾ ಸಮಿತಿ ಸಂಚಾಲಕ ಸದಾಶಿವ ಮಿಜಾರು, ಪದ್ಮನಾಭ, ಕರ್ನಾಟಕ ರಾಜ್ಯ ಕುಡುಬಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ ಗೋಳಿಯಂಗಡಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶ್ರೀನಿವಾಸ್ ಗೌಡ, ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ದಯಾನಂದ್ ಮಡ್ಕೇಕರ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಕುಡುಬಿ ಸಮಾಜದ ಹಿರಿಯರಾದ ಸುಂದರ ಗೌಡ ಅವರನ್ನು ಸನ್ಮಾನಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್, ಸಮಾಜ ಸೇವಕ ಆರ್ ಕೆ. ಪೃಥ್ವಿರಾಜ್, ಮುಖ್ಯ ಶಿಕ್ಷಕಿ ಸುಶೀಲ, ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ ಅಧ್ಯಕ್ಷ ಕೃಷ್ಣ ಕೊಂಪದವು, ಕಾರ್ಯದರ್ಶಿ ಶೇಖರ್ ಗೌಡ ಉಪಸ್ಥಿತರಿದ್ದರು.
ಸಾಂಪ್ರದಾಯಿಕ ನೃತ್ಯ, ಮೆರವಣಿಗೆ
ಹಳೇ ಕಾಲದ ವಸ್ತುಗಳ ಪ್ರದರ್ಶನ, ಅಕಾಡೆಮಿಯಿಂದ ಪುಸ್ತಕ ಮಾರಾಟ, ಪ್ರದರ್ಶನ ಮಳಿಗೆ ಏರ್ಪಡಿಸಲಾಗಿತ್ತು. ಸಮಾರೋಪ ಕಾರ್ಯಕ್ರಮದ ಬಳಿಕ ವಿವಿಧ ವಿನೋದಾವಳಿ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ 1500ಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ಮೊದಲು ದೂಮಚಡವು ಮುಖ್ಯರಸ್ತೆಯಿಂದ ಮಿಜಾರ್ ಅಣ್ಣಪ್ಪ ಸಭಾಭವನದವರೆಗೆ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. 30ಕ್ಕೂ ಮಿಕ್ಕಿ ಕುಡುಬಿ ಕಲಾ ತಂಡಗಳಿಂದ ಗುಮಟೆ, ಕೋಲಾಟ, ಜಾನಪದ ನೃತ್ಯ ರೂಪಕಗಳ ಪ್ರದರ್ಶನ ಜರುಗಿತು.