

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಮುಂಭಾಗದ ರಸ್ತೆ ಉನ್ನತೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಮಾತನಾಡಿ ಅವರು, 75 ಲಕ್ಷ ರೂ.ವೆಚ್ಚದಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಮುಂಭಾಗದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತಿದ್ದು ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ಅಂತಿಮ ಹಂತದ ಕೆಲವೊಂದು ಕೆಲಸ ಬಾಕಿಯುಳಿದಿದೆ. ಹಳೇ ಒಳಚರಂಡಿ ಕೊಳವೆ ಬದಲಾಯಿಸಿ ಹೊಸ ಒಳಚರಂಡಿ ಜಾಲ ರಚಿಸಲಾಗಿದೆ. 24*7 ಕುಡಿಯುವ ನೀರು ಪೂರೈಸುವ ಜಲಸಿರಿ ಯೋಜನೆ ಹಾಗೂ ಗೈಲ್‌ಗ್ಯಾಸ್ ಸಂಪರ್ಕದ ಪ್ರಮುಖ ಕೊಳವೆಗಳ ಅಳವಡಿಕೆ ಪೂರ್ಣಗೊಳಿಸಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿದೆ. ಫುಟ್‌ಪಾತ್ ಹಾಗೂ ರಸ್ತೆಯುದ್ದಕ್ಕೂ ದಾರಿದೀಪ ಅಳವಡಿಸಲು ಪ್ರತ್ಯೇಕವಾಗಿ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಪೋರೇಟರ್ ಜಯಶ್ರೀ ಕುಡ್ವ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ರವಿಶಂಕರ್ ಮಿಜಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸಾಯಿರಾಮ್, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ವಸಂತ ಜೆ.ಪೂಜಾರಿ, ಅರುಣ್ ಶೇಟ್, ದಿನಕರ ಶೆಟ್ಟಿ, ಪ್ರವೀಣ್ ಕುದ್ರೋಳಿ, ಜನಾರ್ದನ ಕುಡ್ವ, ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.