

ಮಂಗಳೂರು: ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ನಡಾವಳಿ ಉತ್ಸವವು ಎ.7ರಿಂದ ಆರಂಭವಾಗಿದ್ದು, ಎ.9ರ ವರೆಗೆ ಶ್ರದ್ಧಾಭಕ್ತಿಯಿಂದ ನೆರವೇರಲಿದೆ.
ಶುಕ್ರವಾರ ಬೆಳಗ್ಗೆ ಭಂಡಾರ ಆರೋಹಣವಾಗಿ ಭಂಡಾರ ಮಂದಿರದಿಂದ ಶ್ರೀ ಮಾತೆಯರ ಪವಿತ್ರ ಭಂಡಾರ ಉತ್ಸವ ಕ್ಷೇತ್ರಗಳಿಗೆ ಆಗಮಿಸಿತು. ಮಧ್ಯಾಹ್ನ ಶ್ರೀ ಚೀರುಂಭ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ನೆರವೇರಿತು. ರಾತ್ರಿ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಬಲಿ ಉತ್ಸವ, ಮೂರ್ತಿ ದರ್ಶನ ನಡೆಯಿತು. ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು, ಆಡಳಿತ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
ಎ.8ರಂದು ಮಧ್ಯಾಹ್ನ 12.30ಕ್ಕೆ ಶ್ರೀ ಪಾಡಂಗರ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ, ರಾತ್ರಿ 9.30ರಿಂದ ಭೇಟಿಕಳ, ಮೇಲೇರಿಗೆ ಅಗ್ನಿ ಸ್ಪರ್ಶ, ವೀರಸ್ತಂಭ ದರ್ಶನ, ರಾತ್ರಿ 1.30ಕ್ಕೆ ಶ್ರೀ ಭಗವತೀ ಮಾತೆಯರ ಭವ್ಯ ಶೋಭಾಯಾತ್ರೆ, ಮುಂಜಾನೆ 2 ಗಂಟೆಗೆ ಕೆಂಡಸೇವೆ ನಡೆಯಲಿದೆ. ಎ.9ರಂದು ಶ್ರೀ ಪುಲ್ಲೂರಾಳಿ ಭಗವತೀ ಮಾತೆಯ ಸನ್ನಿಧಿಯಲ್ಲಿ ಮಧ್ಯಾಹ್ನ ವಿಶೇಷ ಮಹಾಪೂಜೆ, ರಾತ್ರಿ 9.30ಕ್ಕೆ ಕೆಂಡಸೇವೆ, ಮೂರ್ತಿದರ್ಶನ, ಭಂಡಾರ ಅವರೋಹಣ ನಡೆಯಲಿದೆ.